ADVERTISEMENT

ಬಾಂಗ್ಲಾ ಪ್ರಧಾನಿಗೆ ಡಾಕ್ಟರೇಟ್ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಅಗರ್ತಲಾ (ಪಿಟಿಐ): ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಗುರುವಾರ ತ್ರಿಪುರಾ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಉಪ ಖಂಡದಲ್ಲಿ ಬಹು ಸಂಸ್ಕೃತಿಯ ಪ್ರಜಾಪ್ರಭುತ್ವ ರಕ್ಷಣೆಗಾಗಿ ಉನ್ನತ ಕೊಡುಗೆ ಸಲ್ಲಿಸಿದ್ದಕ್ಕಾಗಿ ಹಸೀನಾ ಅವರಿಗೆ ಈ ಗೌರವ ಡಾಕ್ಟರೇಟ್ ನೀಡಲಾಗಿದೆ.

ಬಾಂಗ್ಲಾದೇಶ ವಿಮೋಚನೆಯ ಪವಿತ್ರ ಸ್ಥಳಕ್ಕೆ ಆಗಮಿಸಿರುವುದರಿಂದ ತಮ್ಮ ಬಹುದಿನಗಳ ಕನಸು ಈಡೇರಿದೆ ಎಂದು ಹಸೀನಾ ನುಡಿದರು.

ADVERTISEMENT

1971ರ ಬಾಂಗ್ಲಾ ವಿಮೋಚನೆ ವೇಳೆ ತ್ರಿಪುರ ಯುದ್ಧದ ಕೇಂದ್ರ ಸ್ಥಳವಾಗಿತ್ತು. ಗಡಿಯಲ್ಲಿ ಸುಮಾರು 15 ಲಕ್ಷ ಜನರು ರಕ್ಷಣೆ ಪಡೆದಿದ್ದರು ಎಂದರು.

`ಪಾಕಿಸ್ತಾನದ ಸೈನ್ಯದ ಅಮಾನವೀಯತೆ ಮತ್ತು ಬರ್ಬರ ಚಿತ್ರಹಿಂಸೆಯಿಂದ ನೊಂದು ವಲಸೆ ಬಂದ ನಮ್ಮ ದೇಶದ ಜನರಿಗೆ  ತ್ರಿಪುರಾದ ಜನರು ಆಹಾರ, ರಕ್ಷಣೆ ಮತ್ತು ಬಟ್ಟೆಗಳನ್ನು ನೀಡಿ ರಕ್ಷಣೆ ನೀಡಿದ್ದಾರೆ~ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

`ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿಯೇ ತರಬೇತಿ ಪಡೆದಿದ್ದು, ಭಾರತದ ಸಹಕಾರದಿಂದ 1971ರ ಡಿ. 16ರಂದು ಬಾಂಗ್ಲಾದೇಶ ವಿಮೋಚನೆಯಾಯಿತು. ಈ ಸಹಾಯ ಮರೆಯಲು ಹೇಗೆ ಸಾಧ್ಯ~ ಎಂದು ಗದ್ಗದಿತರಾದರು.

ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಬಾಂಗ್ಲಾದೇಶದ ವಿದೇಶಾಂಗ ಸಚಿವ ದಿಪು ಮೋನಿ, ಕೇಂದ್ರ ಸಚಿವ ಕಪಿಲ್ ಸಿಬಲ್, ರಾಜ್ಯಪಾಲ ಡಿ.ವೈ. ಪಾಟೀಲ, ಕುಲಪತಿ ಅಮಿಯಾ ಕುಮಾರ ಬಗಚಿ ಮುಂತಾದವರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.