ADVERTISEMENT

ಬಾಟ್ಲಾ : ಶಿಕ್ಷೆ ಪ್ರಮಾಣ ಮಂಗಳವಾರಕ್ಕೆ ನಿಗದಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2013, 10:24 IST
Last Updated 29 ಜುಲೈ 2013, 10:24 IST
ಇಂಡಿಯನ್ ಮುಜಾಹಿದ್ದೀನ್ ಸಂಚಾಲಕ ಶಹಜಾದ್ ಅಹಮ್ಮದ್‌ - ಪಿಟಿಐ ಚಿತ್ರ
ಇಂಡಿಯನ್ ಮುಜಾಹಿದ್ದೀನ್ ಸಂಚಾಲಕ ಶಹಜಾದ್ ಅಹಮ್ಮದ್‌ - ಪಿಟಿಐ ಚಿತ್ರ   

ನವದೆಹಲಿ (ಪಿಟಿಐ/ಐಎಎನ್‌ಎಸ್) : ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆ ಸಂಚಾಲಕ ಸಹಜಾದ್ ಅಹಮದ್‌ಗೆ ಪ್ರಕಟಿಸಬೇಕಿದ್ದ ಶಿಕ್ಷೆಯ ಪ್ರಮಾಣವನ್ನು ದೆಹಲಿ ನ್ಯಾಯಾಲಯವು ಮಂಗಳವಾರಕ್ಕೆ ಕಾಯ್ದಿರಿಸಿದೆ.

2008ರ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದರ್ ಕುಮಾರ್ ಶಾಸ್ತ್ರಿ ಅವರು ತಪ್ಪಿತಸ್ಥ ಐಎಂ ಸಂಚಾಲಕ ಸಹಜಾದ್ ಅಹ್ಮದ್‌ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.

ಪೊಲೀಸ್ ಎನ್‌ಕೌಂಟರ್ ಅಥವಾ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಾಚಾತನದ ಬಗ್ಗೆ ಕಾಂಗ್ರೆಸ್, ಬಿಎಸ್‌ಪಿ ಮತ್ತು ಎಸ್‌ಪಿಯ ಕೆಲ ಮುಖಂಡರು ಅನುಮಾನ ವ್ಯಕ್ತ ಪಡಿಸಿದ್ದರು. ಜಾಮಿಯಾ ಶಿಕ್ಷಕರ ಸಂಘವೂ ಸಹ ಪೊಲೀಸರ ವಾದದ ಬಗ್ಗೆ ಶಂಕೆ ವ್ಯಕ್ತಪಡಿಸಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ಪರ ವಕೀಲರು ಕೂಡ ಇದೊಂದು ಪೂರ್ವ ನಿಯೋಜಿತ ಎನ್‌ಕೌಂಟರ್ ಎಂದು ಯಾವತ್ತೂ ವಾದ ಮಂಡಿಸದಿರುವುದರ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸುವ ಮೂಲಕ ಉಗ್ರರ ವಿರುದ್ಧದ ಕಾರ್ಯಾಚರಣೆ ಅಸಲಿ ಎಂದು ತೀರ್ಪು ನೀಡಿ, ಗುಂಡಿನ ಚಕಮಕಿಯಲ್ಲಿ ಶಹಜಾದ್ ಅಹಮದ್, ಇನ್‌ಸ್ಪೆಕ್ಟರ್ ಎಂ ಸಿ ಶರ್ಮಾ ಅವರನ್ನು ಕೊಂದ ಆರೋಪವನ್ನು ಖಚಿತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.