ADVERTISEMENT

ಬಾಬರಿ ಪ್ರಕರಣ: ಮೇಲ್ಮನವಿ ವಿಳಂಬವೇಕೆ- ಸಿಬಿಐಗೆ ಸುಪ್ರೀಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 10:32 IST
Last Updated 2 ಏಪ್ರಿಲ್ 2013, 10:32 IST

ನವದೆಹಲಿ (ಪಿಟಿಐ): ಬಾಬರಿ ಮಸೀದಿ ನಾಶ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಇತರರಿಗೆ ಸಂಚು ಆಪಾದನೆ ಅನ್ವಯಿಸುವುದಿಲ್ಲ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡುತ್ತಿರುವುದೇಕೆ ಎಂಬುದಾಗಿ ಸುಪ್ರೀಂಕೋರ್ಟ್ ಮಂಗಳವಾರ ಸಿಬಿಐಯನ್ನು ಪ್ರಶ್ನಿಸಿತು.

ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಪೀಠವು ಎರಡು ವಾರಗಳ ಒಳಗಾಗಿ ಈ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರದ ಹಿರಿಯ ಕಾನೂನು ಅಧಿಕಾರಿಗೆ ನಿರ್ದೇಶನ ನೀಡಿತು. ಕಾನೂನು ಅಧಿಕಾರಿಯ ಉದಾಸೀನದಿಂದಾಗಿ ಮೇಲ್ಮನವಿ ಸಲ್ಲಿಸುವಲ್ಲಿ 167 ದಿನಗಳಷ್ಟು ವಿಳಂಬವಾಗಿರುವುದನ್ನು ಗಮನಿಸಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು.

ಸುಪ್ರೀಂಕೋರ್ಟಿನ ಹಿಂದಿನ ಆದೇಶಕ್ಕೆ ಅನುಗುಣವಾಗಿ ಸಿಬಿಐ ಮಂಗಳವಾರ ಪೀಠದ ಮುಂದೆ ಪ್ರಕರಣದ ವಿವರಗಳನ್ನು ಸಲ್ಲಿಸಿತು. ಅಡಿಷನಲ್ ಸಾಲಿಸಿಟರ್ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರ ಅನುಮೋದನೆ ಮತ್ತು ಅಭಿಪ್ರಾಯಕ್ಕಾಗಿ ಕಾದಿರುವುದರಿಂದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಬೇಕಾದ ಮೇಲ್ಮನವಿಯ ಕರಡು ತಯಾರಿ ವಿಳಂಬಗೊಂಡಿದೆ ಎಂದು ಈ ವಿವರಗಳಲ್ಲಿ ತಿಳಿಸಲಾಗಿತ್ತು.

'ಸಾಲಿಸಿಟರ್ ಜನರಲ್ ಅವರಿಂದಾಗಿ ವಿಳಂಬವಾಗಿದೆ. ಆದ್ದರಿಂದ ಸಂಬಂಧಪಟ್ಟವರ ಪ್ರಮಾಣಪತ್ರ ವಿಳಂಬವೇಕಾಯಿತು ಎಂಬುದನ್ನು ಅರಿಯಲು ಅಗತ್ಯ ಎಂದು ಪೀಠ ಹೇಳಿತು.

'ನಿಮ್ಮ ಹಿತದೃಷ್ಟಿಯಿಂದ ಪ್ರಮಾಣಪತ್ರ ಸಲ್ಲಿಸುವುದು ಒಳ್ಳೆಯದು' ಎಂದು ಹೇಳಿದ ಪೀಠ ಪ್ರಮಾಣಪತ್ರ ಸಲ್ಲಿಸಲು ಸಿಬಿಐಗೆ ಎರಡು ವಾರಗಳ ಕಾಲಾವಕಾಶ ನೀಡಿತು. ಹಿರಿಯ ಕಾನೂನು ಅಧಿಕಾರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದೂ ಪೀಠ ಹೇಳಿತು.

ಅಡ್ವಾಣಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಒಳಸಂಚು ಆರೋಪದಿಂದ ಕೈಬಿಟ್ಟು ಅಲಹಾಬಾದ್ ಹೈಕೋರ್ಟ್ ಮತ್ತು ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತ್ತು.

ಆರೋಪ ಕೈಬಿಡಲಾದ ಇತರರಲ್ಲಿ ಸತೀಶ್ ಪ್ರಧಾನ್, ಸಿ.ಆರ್. ಬನ್ಸಲ್, ಅಶೋಕ ಸಿಂಘಾಲ್, ಗಿರಿರಾಜ್ ಕಿಶೋರ್, ಸಾದ್ವಿ ಋತಂಭರಾ, ವಿ.ಎಚ್. ದಾಲ್ಮಿಯಾ, ಮಹಂತ ಅವೈದ್ಯನಾಥ, ಆರ್.ವಿ. ವೇದಾಂತಿ, ಪರಮ ಹಂಸ ರಾಮ ಚಂದ್ರ ದಾಸ್, ಜಗದೀಶ ಮುನಿ ಮಹಾರಾಜ್, ಬಿ.ಎಲ್. ಶರ್ಮಾ, ನೃತ್ಯ ಗೋಪಾಲ ದಾಸ್, ಸತೀಶ್ ನಗರ ಮತ್ತು ಮೋರೇಶ್ವರ ಸವೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.