ಮುಂಬೈ/ಜೈಪುರ (ಪಿಟಿಐ): ‘ಬಾಲಿವುಡ್‌ನ ಕೆಲವರು ಅಸಹಿಷ್ಣುತೆಯನ್ನು ವಿಶ್ಲೇಷಿಸುವ ರೀತಿಯೇ ಅತ್ಯಂತ ಬಾಲಿಶವಾಗಿದ್ದು, ಅವರ ವಾದವನ್ನು ನಾನು ಒಪ್ಪುವುದಿಲ್ಲ’ ಎಂದು ರಾಜ್ಯಸಭಾ ಸದಸ್ಯ ಹಾಗೂ ನಟ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
‘ಬಾಲಿವುಡ್‌ನ ಕೆಲ ಮಂದಿ ಅಸಹಿಷ್ಣುತೆ ವಿಚಾರವನ್ನು ಅವಸರವಸರವಾಗಿ ಚರ್ಚೆಗೆ ತರುತ್ತಿದ್ದಾರೆ. ಇದು ಬಾಲಿಶವಲ್ಲದೆ ಬೇರೇನೂ ಅಲ್ಲ. ಇವರ ವಾದ ಒಪ್ಪಲಾರೆ’ ಎಂದು ಸಿನ್ಹಾ ಜೈಪುರ ಸಾಹಿತ್ಯ ಉತ್ಸವದಲ್ಲಿ ಹೇಳಿದ್ದಾರೆ. ಇಲ್ಲಿ ಯಶಸ್ಸು ಮಾತ್ರವೇ ಮುಖ್ಯ. ಅದರ ಹೊರತಾಗಿ ಅವರು ಬಿಹಾರಿ, ಮುಸ್ಲಿಂ, ಹಿಂದೂ ಎಂಬುದಾಗಿ ತಾರತಮ್ಯ ಮಾಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಜೈಪುರ ಸಾಹಿತ್ಯೋತ್ಸವದ ಮೊದಲ ದಿನ ಸಿನಿಮಾ ನಿರ್ದೇಶಕ ಕರಣ್ ಜೋಹರ್ ಅವರು, ‘ವಾಕ್ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಗಳು ದೊಡ್ಡ ಜೋಕ್’ ಎಂದಿದ್ದರು. ಇದಕ್ಕೆ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಅಮೀರ್ ಖಾನ್ ವಿರುದ್ಧ ಅಕ್ಷಯ್ ಕುಮಾರ್ ವಾಗ್ದಾಳಿ: ಅಸಹಿಷ್ಣುತೆ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಧ್ಯಪ್ರವೇಶಿಸಿದ್ದು, ಅಮೀರ್ ಖಾನ್ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ. ‘ಎಲ್ಲ ದೇಶಗಳಲ್ಲೂ ಏರಿಕೆ–ಇಳಿಕೆ ಸಾಮಾನ್ಯ. ಹೀಗೆಂದ ಮಾತ್ರಕ್ಕೆ ಉದ್ಧಟತನದ ಹೇಳಿಕೆ ನೀಡುವುದು ಒಂದಿಷ್ಟೂ ಸರಿಯಲ್ಲ’ ಎಂದು ಹೇಳಿದರು. ನಾನು ಭಾರತೀಯನೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದೂ ಅಕ್ಷಯ್ ಕುಮಾರ್ ಹೇಳಿದರು.
‘ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಕೇವಲ ತಪ್ಪುಗಳನ್ನು ಮಾತ್ರ ಗುರುತಿಸುವುದು ಹವ್ಯಾಸವಾಗಿಬಿಟ್ಟಿದೆ. ಆದಾಗ್ಯೂ ಎಲ್ಲರಿಗೂ ಮಾತನಾಡಲು ಹಕ್ಕು ಇದೆ’ ಎಂದರು. ‘ಬಾಲಿವುಡ್ ಮಂದಿ ಅಸಹಿಷ್ಣುತೆ ಬಗ್ಗೆ ಮಾತನಾಡುವುದೇ ಒಂದು ದೊಡ್ಡ ಜೋಕ್. ಇವರಲ್ಲಿ ಕೆಲವರು ನನ್ನ ಸಹೋದ್ಯೋಗಿಗಳೂ ಇದ್ದಾರೆ. ಇವರೆಲ್ಲಾ ಹೀಗೆ ಹೇಳಿಕೆ ನೀಡುವುದನ್ನು ನೋಡಿದರೆ ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಿಲ್ಲ’ ಎಂದು ಅಕ್ಷಯ್ ಹೇಳಿದರು.
ನಟಿ ಕಾಜೋಲ್ ಕೂಡಾ ಇಂಥದ್ದೇ ಮಾತುಗಳನ್ನು ಹೇಳಿದ್ದರು. ದೇಶದಲ್ಲಿ ಏನು ನಡೆಯುತ್ತದೋ ಅದು ಸಿನಿಮಾ ಉದ್ಯಮದಲ್ಲಿ ಪ್ರತಿಫಲನಗೊಳ್ಳತ್ತದೆ. ಆದಾಗ್ಯೂ ಯಾವುದೇ ವಿಭಜಿತ ಮಾರ್ಗ, ಜಾತಿ, ಮತ, ಅಸಹಿಷ್ಣುತೆ ಎಂಬುದು ಬಾಲಿವುಡ್‌ನಲ್ಲಿ ಇಲ್ಲ’ ಎಂದು ಕಾಜೋಲ್ ಹೇಳಿದ್ದರು.
ಸಂಸದೀಯ ವ್ಯವಸ್ಥೆ ಭಾರತಕ್ಕೆ ಸರಿಹೊಂದುವುದಿಲ್ಲ: ಸಂಸದೀಯ ವ್ಯವಸ್ಥೆಯು ಭಾರತಕ್ಕೆ ಸರಿಹೊಂದುವುದಿಲ್ಲ ಎಂದು ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಬ್ರಿಟಿಷರಿಂದ ಬಂದ ಎಲ್ಲವನ್ನೂ ಒಪ್ಪಿಕೊಳ್ಳಬೇಕೆಂಬ ಸಿದ್ಧಾಂತದಿಂದಾಗಿ ದೇಶ ಇದಕ್ಕೆ ಅಂಟಿಕೊಂಡಿತು ಎಂದು ಹೇಳಿದ್ದಾರೆ.
‘ದೊಡ್ಡ ಜನಸಂಖ್ಯೆಯ ಹಾಗೂ ವೈವಿಧ್ಯತೆಯಿಂದ ಕೂಡಿರುವ ದೇಶದಲ್ಲಿ ಸಂಸದೀಯ ವ್ಯವಸ್ಥೆ ಕೆಲಸ ಮಾಡುವುದು ಕಷ್ಟ’ ಎಂದರು. ಜೈಪುರ ಸಾಹಿತ್ಯ ಉತ್ಸವದ ಕೊನೆಯ ದಿನದ ಗೋಷ್ಠಿಯಲ್ಲಿ ಭಾಗವಹಿಸಿದ್ದ ಶಶಿ ತರೂರ್, ‘ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ’ ವಿಷಯದ ಕುರಿತು ಬ್ರಿಟನ್‌ನ ಲೇಬರ್ ಪಕ್ಷದ ಸಂಸದ ಟ್ರಿಸ್ಟಮ್ ಹಂಟ್ ಹಾಗೂ ಪತ್ರಕರ್ತ ಸ್ವಪನ್‌ದಾಸ್ ಗುಪ್ತಾ ಜತೆ ಸಂವಾದ ನಡೆಸಿದರು.
ಸೈಮನ್ ಕಮಿಷನ್ ಮುಖ್ಯಸ್ಥರಾದ ಕ್ಲೆಮೆಂಟ್ ಅಟ್ಲಿಯವರು ಭಾರತಕ್ಕೆ ಅಧ್ಯಕ್ಷೀಯ ಆಡಳಿತ ಸೂಕ್ತ ಎಂದು ಅಭಿಪ್ರಾಯಪಟ್ಟಾಗ, ಭಾರತದ ರಾಷ್ಟ್ರೀಯವಾದಿ ನಾಯಕರು ಅದನ್ನು ಉಗ್ರವಾಗಿ ವಿರೋಧಿಸಿದ್ದರು ಎಂದು ತರೂರ್ ಇದೇ ವೇಳೆ ನೆನಪಿಸಿಕೊಂಡರು.
*
ದೇಶ ತೊರೆಯುತ್ತೇನೆ ಎಂದಿಲ್ಲ: ಅಮೀರ್ ಭಾರತ ಅಸಹಿಷ್ಣು ದೇಶ ಹಾಗೂ ಈ ಕಾರಣಕ್ಕೆ ದೇಶ ತೊರೆಯುತ್ತೇನೆ ಎಂಬ ಅರ್ಥದಲ್ಲಿ ನಾನು ಮಾತನಾಡಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
‘ಭಾರತದಷ್ಟು ವೈವಿಧ್ಯತೆಯಿಂದ ಕೂಡಿರುವ ದೇಶ ಮತ್ತೊಂದಿಲ್ಲ. ನಾನು ಇಲ್ಲೇ ಹುಟ್ಟಿದ್ದು, ಇಲ್ಲೇ ಸಾಯುತ್ತೇನೆ’ ಎಂದು ಅಮೀರ್ ಹೇಳಿದ್ದಾರೆ. ನಟ ಅಕ್ಷಯ್ ಕುಮಾರ್ ಅವರಿಂದ ವ್ಯಕ್ತವಾದ ವಿರೋಧದ ನಂತರ ಅಮೀರ್ ತಮ್ಮ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದಕ್ಕೆ ಮಾಧ್ಯಮಗಳನ್ನು ಹೊಣೆ ಮಾಡುತ್ತೇನೆ. ನಾನು ವಿದೇಶಗಳಲ್ಲಿ ಎರಡು ವಾರಗಳಿಗಿಂತ ಹೆಚ್ಚು ಉಳಿಯುವುದಿಲ್ಲ. ನಾನು ನನ್ನ ದೇಶ ಹಾಗೂ ಮನೆಯವರನ್ನು ಬಿಟ್ಟಿರಲಾರೆ ಎಂದು ಅವರು ಅವರು ಹೇಳಿದ್ದಾರೆ.
*
ಸಚಿನ್ ಅವರಂತಹ ತಾರೆಯರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವುದು ವ್ಯರ್ಥ. ಅಂಥವರನ್ನು ಗೌರವಿಸಲು ಬೇರೆ ಏನಾದರೂ ಮಾಡಬೇಕು.
-ಶತ್ರುಘ್ನ ಸಿನ್ಹಾ, ನಟ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.