ADVERTISEMENT

ಬಾಲ್ಯ ವಿವಾಹ ನಿಷೇಧವೇ ಲವ್‌ ಜಿಹಾದ್‌ಗೆ ಕಾರಣ ಎಂದ ಬಿಜೆಪಿ ಶಾಸಕ

ಪಿಟಿಐ
Published 6 ಮೇ 2018, 16:02 IST
Last Updated 6 ಮೇ 2018, 16:02 IST
ಗೋಪಾಲ ಪರ್ಮಾರ್‌
ಗೋಪಾಲ ಪರ್ಮಾರ್‌   

ಅಗರ್‌ಮಾಲ್ವಾ: ‘ಹೆಣ್ಣಿಗೆ ಮದುವೆಯಾಗುವ ವಯೋಮಿತಿಯನ್ನು 18 ವರ್ಷ ಎಂಬುದಾಗಿ ಕಾನೂನುಬದ್ಧಗೊಳಿಸಿರುವುದು, ಬಾಲ್ಯ ವಿವಾಹ ನಿಷೇಧ ಒಂದು ರೀತಿ ರೋಗವೇ ಸರಿ. ಇಂತಹ ನಿರ್ಬಂಧಗಳೇ ಪ್ರಿಯಕರನೊಂದಿಗೆ ಓಡಿಹೋಗಲು, ಲವ್‌ ಜಿಹಾದ್‌ಗೆ ದಾರಿ ಮಾಡಿ ಕೊಡುತ್ತದೆ’. ಇದು ಮಧ್ಯಪ್ರದೇಶದ ಅಗರ್‌ಮಾಲ್ವಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲ ಪರ್ಮಾರ್‌ ಅವರ ಪ್ರತಿಪಾದನೆ.

ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಪರ್ಮಾರ್, ‘ಲವ್‌ ಜಿಹಾದ್‌ ಬಲೆಗೆ ಬೀಳದಂತೆ ನಿಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣಿಡಿ’ ಎಂದು ಪಾಲಕರಿಗೆ ಸಲಹೆ ನೀಡಿದರಲ್ಲದೆ, ‘ಮದುವೆಯಾಗಲು 18 ವರ್ಷದ ವಯೋಮಿತಿಯನ್ನು ಸರ್ಕಾರ ನಿಗದಿ ಮಾಡಿದ ನಂತರ ಹುಡುಗಿಯರು ಮನೆ ತೊರೆದು ಪ್ರಿಯಕರನೊಂದಿಗೆ ಓಡಿ ಹೋಗುವುದು ಸಹ ಹೆಚ್ಚಾಯಿತು’ ಎಂದರು.

‘ಹಿಂದಿನ ದಿನಗಳಲ್ಲಿ ಬಾಲ್ಯವಿವಾಹ ರೂಢಿಯಲ್ಲಿತ್ತು. ಇಂತಹ ವಿವಾಹಗಳಿಂದ ಗಂಡ–ಹಂಡತಿ ನಡುವಿನ ಬಾಂಧವ್ಯ ಸಹ ಗಟ್ಟಿಯಾಗಿರುತ್ತಿತ್ತು’ ಎಂದೂ ಹೇಳಿದರು.

ADVERTISEMENT

‘ನಮ್ಮ ಮಗಳು ಏನು ಮಾಡುತ್ತಿದ್ದಾಳೆ ಎಂಬುದನ್ನು ನಾವು ಗಮನಿಸುತ್ತಿಲ್ಲ. ಕೋಚಿಂಗ್‌ ಕ್ಲಾಸ್‌ಗೆ ಎಂದು ಹೇಳಿ ಹೋಗುವ ಮಗಳು ಅಲ್ಲಿ ಬರುವ ಪೋಲಿಗಳ ಸಹವಾಸ ಮಾಡಿ ನಂತರ ಓಡಿ ಹೋಗುತ್ತಾಳೆ. ಲವ್‌ ಜಿಹಾದ್‌ ಪ್ರಕರಣಗಳೂ ಇತ್ತೀಚೆಗೆ ಹೆಚ್ಚುತ್ತಿದ್ದು, ಈ ಬಗ್ಗೆ ತಾಯಂದಿರು, ಸಹೋದರಿಯರು ಎಚ್ಚರ ವಹಿಸಬೇಕು. ನಿರ್ಲಕ್ಷಿಸಿದರೆ ನಿಮ್ಮ ಮನೆಗಳೇ ಹಾಳಾಗುತ್ತವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.