ADVERTISEMENT

ಬಿಎಸ್‌ವೈ ಕುಟುಂಬದ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ: ಚಿತ್ರದುರ್ಗ ಜಿಲ್ಲೆಯಲ್ಲಿ ಆರ್. ಪ್ರವೀಣ್ ಚಂದ್ರ ಎಂಬುವವರಿಗೆ ಗಣಿ ಗುತ್ತಿಗೆ ಮಂಜೂರು ಮಾಡಲು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿಗಳು ಆರು  ಕೋಟಿ ರೂಪಾಯಿ `ಲಾಭ~ ಪಡೆದಿದ್ದಾರೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್) ಸುಪ್ರೀಂ ಕೋರ್ಟ್ ರಚಿಸಿರುವ `ಕೇಂದ್ರ ಉನ್ನತಾಧಿಕಾರ ಸಮಿತಿ~ಗೆ ಮತ್ತೊಂದು ದೂರು ಸಲ್ಲಿಸಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ `ಎಸ್‌ಪಿಎಸ್~ನ  ಎಸ್.ಆರ್.ಹಿರೇಮಠ ಹಾಗೂ ವಿಷ್ಣು ಕಾಮತ್, ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗೆ ಸಲ್ಲಿಸಿರುವ ದೂರಿನಲ್ಲಿ ಆರ್. ಪ್ರವೀಣ್ ಚಂದ್ರ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿ ಗುತ್ತಿಗೆ ಮಂಜೂರು ಮಾಡಲು ಮಾಜಿ ಮುಖ್ಯಮಂತ್ರಿ ಕುಟುಂಬ 6 ಕೋಟಿ ರೂಪಾಯಿ ಪಡೆದಿರುವ ಹಗರಣ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಟುಂಬದ ಸದಸ್ಯರ ಕಂಪೆನಿಗಳು ಮತ್ತು ಪ್ರವೀಣ್ ಚಂದ್ರ ಅವರ ನಡುವೆ ನಡೆದಿದೆ ಎನ್ನಲಾದ `ಹಣಕಾಸು ವ್ಯವಹಾರ~ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರು ತಮ್ಮ ದೂರಿನ ಜತೆ ನೀಡಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಆರೋಪ ಪರಿಶೀಲಿಸಿ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬುದನ್ನು ಶಿಫಾರಸು ಮಾಡುವಂತೆ ಸಿಇಸಿ ಗೆ ಕೇಳಿದೆ. ಈ ಹಿನ್ನೆಲೆಯಲ್ಲಿ ಎಸ್‌ಪಿಎಸ್ ಸದಸ್ಯರ ವಿಚಾರಣೆ ನಡೆದಿದೆ.
 
ಬರುವ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠಕ್ಕೆ ಸಿಇಸಿ ತನ್ನ ಶಿಫಾರಸು ಸಲ್ಲಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ರಾಮಜ್ಜನಹಳ್ಳಿ ಕಾವಲ್ ಮತ್ತು ಮಲ್ಲಾಪುರದ 132.2 ಹೆಕ್ಟೇರ್ ಭೂಮಿಯಲ್ಲಿ ಕಬ್ಬಿಣ ಅದಿರು ಮತ್ತು ಮ್ಯಾಂಗನೀಸ್ ಹೊರ ತೆಗೆಯಲು ಪ್ರವೀಣ್ ಚಂದ್ರ ಅವರ ಕಂಪೆನಿಗೆ ಪರವಾನಗಿ ನೀಡಿದೆ. ಕೇಂದ್ರ ಗಣಿ ಸಚಿವಾಲಯದಿಂದ ಅನುಮೋದನೆ ಪಡೆದ ಬಳಿಕ 2010ರಲ್ಲಿ  ಗುತ್ತಿಗೆ ಮಂಜೂರು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರ ಸಂಬಂಧಿಕರಾದ ಸೋಹನ್ ಕುಮಾರ್,  ತೇಜಸ್ವಿನಿ ನಿರ್ದೇೀಶಕರಾಗಿರುವ `ಭಗತ್ ಹೋಮ್ಸ ಪ್ರೈ.ಲಿ~. 2.5ಕೋಟಿ ಹಾಗೂ ರಾಘವೇಂದ್ರ, ವಿಜಯೇಂದ್ರ ಮತ್ತು ಸೋಹನ್ ಕುಮಾರ್ ಪಾಲುದಾರರಾಗಿರುವ `ಧವಳಗಿರಿ ಡೆವಲಪರ್ಸ್‌~ 3.5 ಕೋಟಿ ಹಣವನ್ನು ಪ್ರವೀಣ್ ಚಂದ್ರ ಅವರಿಂದ ಪಡೆದಿದೆ ಎಂದು ಆರೋಪ ಮಾಡಲಾಗಿದೆ.

ಇವೆರಡು ಕಂಪೆನಿಗಳ ಲೆಕ್ಕಪತ್ರಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಈ ಹಣವನ್ನು `ಮುಂಗಡ~ ಎಂದು ನಮೂದಿಸಲಾಗಿದ್ದು, ಗುತ್ತಿಗೆ ಮಂಜೂರಾತಿಗೆ ಮುನ್ನ ಪಡೆಯಲಾಗಿದೆ. ಇದರಿಂದಾಗಿ  ಗುತ್ತಿಗೆ ಮಂಜೂರಾತಿ ವ್ಯವಹಾರಗಳು ಸಂಶಯಕ್ಕೆ ಎಡೆ ಮಾಡಿದ್ದು, ಸತ್ಯಾಸತ್ಯತೆ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಸಿಇಸಿ ಮುಂದೆ ಪ್ರತಿಪಾದಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಗಣಿ ಖಾತೆ ಹೊಣೆ ನಿರ್ವಹಿಸಿದ್ದರಿಂದ ಭ್ರಷ್ಟಾಚಾರ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆ ಅನಿವಾರ್ಯ ಎಂದು ಅರ್ಜಿಯಲ್ಲಿ ಕೇಳಲಾಗಿದೆ.

ಇದಕ್ಕೂ ಮೊದಲು `ಜಿಂದಾಲ್ ಸ್ಟೀಲ್ಸ್~ (ಜೆಎಸ್‌ಡಬ್ಲ್ಯು) `ಪ್ರೇರಣಾ ಟ್ರಸ್ಟ್~ಗೆ ನೀಡಿದ `ದೇಣಿಗೆ~ ಹಾಗೂ `ಧವಳಗಿರಿ ಡೆವಲಪರ್ಸ್‌~ಗೆ ಸರ್ಕಾರದ ಮಾರ್ಗಸೂಚಿ ದರಕ್ಕಿಂತ ಅಧಿಕ ಹಣ ಪಾವತಿಸಿ `ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ~ (ಎಸ್‌ಡಬ್ಲ್ಯುಎಂಸಿ)ಗೆ ಭೂಮಿ ಖರೀದಿಸಿದ ಪ್ರಕರಣ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು ಎಸ್‌ಪಿಎಸ್ ಸಿಇಸಿಗೆ ಮನವಿ ಮಾಡಿತ್ತು.

ಇದಲ್ಲದೆ, ಬೇಲಿಕೇರಿ ಬಂದರಿನಲ್ಲಿ ವಶಪಡಿಸಿಕೊಂಡಿದ್ದ 5.5ಲಕ್ಷ ಟನ್ ಅಕ್ರಮ ಅದಿರನ್ನು ಕಳುವು ಮಾಡಿ ಸಾಗಿಸಲಾಗಿದೆ. ಈ ಪ್ರಕರಣದಲ್ಲಿ `ಅದಾನಿ ಎಂಟರ್ ಪ್ರೈಸಸ್~ ಕೈವಾಡವಿದ್ದು ಈ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕೆಂದು ಮನವಿ ಸಲ್ಲಿಸಲಾಗಿದೆ. ಈ ಅದಿರನ್ನು ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹೊರ ತೆಗೆಯಲಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.