ADVERTISEMENT

ಬಿಎಸ್‌ವೈ ವಿರುದ್ಧ ಸಿಬಿಐ ತನಿಖೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 20:20 IST
Last Updated 20 ಫೆಬ್ರುವರಿ 2012, 20:20 IST

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು 538 ಕೋಟಿ ರೂಪಾಯಿಗೂ ಅಧಿಕವಾದ ಆಸ್ತಿ ಸಂಪಾದಿಸಿದ್ದಾರೆ ಎಂದು ಧಾರವಾಡ ಮೂಲದ `ಸಮಾಜ ಪರಿವರ್ತನಾ ಸಮುದಾಯ~ (ಎಸ್‌ಪಿಎಸ್) ಗಂಭೀರವಾದ ಆರೋಪ ಮಾಡಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದೆ.

 ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸುತ್ತಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಸಲ್ಲಿಸಿರುವ ದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಟುಂಬದ ಸದಸ್ಯರು ಪಾಲುದಾರರಾಗಿರುವ ಕಂಪೆನಿಗಳು ಬೇರೆ ಬೇರೆ ಕಂಪೆನಿಗಳಿಂದ ಪಡೆದಿದ್ದಾರೆನ್ನಲಾದ ಹಣ, ಖರೀದಿಸಿದ್ದಾರೆ ಎನ್ನಲಾದ ಆಸ್ತಿ  ವಿವರಗಳನ್ನು ಎಸ್‌ಪಿಎಸ್ ಸಮಗ್ರವಾಗಿ ವಿವರಿಸಿದೆ. ಆರೋಪಗಳಿಗೆ ಪೂರಕವಾದ ದಾಖಲೆಗಳನ್ನು ಒದಗಿಸಿದೆ.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠವು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡುವಂತೆ ಸಿಇಸಿಗೆ ಹೇಳಿದೆ. ಮುಂದಿನ ಶುಕ್ರವಾರ ಸಿಇಸಿ ತನ್ನ ಶಿಫಾರಸು ಸಲ್ಲಿಸಲಿದೆ.

ಯಡಿಯೂರಪ್ಪನವರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿದೆಯೇ ಅಥವಾ ರಾಜಕೀಯ ದುರುದ್ದೇಶದಿಂದ ದೂರು ಸಲ್ಲಿಸಲಾಗಿದೆಯೇ ಎಂಬ ಬಗ್ಗೆ ಸಿಇಸಿ ಪರಿಶೀಲನೆ ನಡೆಸುತ್ತಿದೆ.

ಮಾಜಿ ಮುಖ್ಯಮಂತ್ರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಲೋಕಾಯುಕ್ತ ಕೋರ್ಟ್  ವಿಚಾರಣೆ ನಡೆಸುತ್ತಿರುವಾಗ ಸಿಬಿಐ ತನಿಖೆಗೆ ಶಿಫಾರಸು ಮಾಡುವುದು ಸೂಕ್ತವೇ ಎಂಬ ಅಂಶಗಳನ್ನು ಕುರಿತು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಅಕ್ರಮ ಗಣಿಗಾರಿಕೆ ಹಾಗೂ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಡುತ್ತಿರುವ ಎಸ್‌ಪಿಎಸ್ ಮಾಜಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರ ಒಡೆತನದ ಟ್ರಸ್ಟ್‌ಗಳು ಮತ್ತು ಕಂಪೆನಿಗಳು ವಿವಿಧ ಕಂಪೆನಿಗಳಿಂದ ಸ್ವೀಕರಿಸಿರುವ ಹಣಕ್ಕೆ ಸಂಬಂಧಿಸಿದ ದಾಖಲೆಗಳ ಕಂತೆಯನ್ನೇ ಸಿಇಸಿಗೆ ಸಲ್ಲಿಸಿದೆ.

ಧವಳಗಿರಿ ಡೆವಲಪರ್ಸ್‌ 27.66 ಕೋಟಿ, ಭಗತ್ ಹೋಮ್ಸ 10.65ಕೋಟಿ, ಪ್ರೇರಣಾ ಟ್ರಸ್ಟ್ 27.18ಕೋಟಿ, ಹೆಲ್ತ್ ಜೋನ್ ಅಡ್ವೈಸರ್ಸ್‌ ಪ್ರೈ. ಲಿ. 23.25ಕೋಟಿ, ಇಲಿಯಾನ್ ಪ್ರೈ.ಲಿ. 13.75 ಕೋಟಿ, ಬೆಸ್ಟೋ ಇನ್‌ಫ್ರಾಸ್ಟ್ರಕ್ಚರ್ 32.50ಕೋಟಿ, ಅಕ್ಕಮಹಾದೇವಿ ಹಾಗೂ ಮಹಾಬಲೇಶ್ವರ 55.86 ಕೋಟಿ ಸೇರಿದಂತೆ ಹಲವು ಕಂಪೆನಿಗಳು ಪಡೆದಿರುವ ಹಣದ ವಿವರಗಳನ್ನು ಸಿಇಸಿಗೆ ನೀಡಲಾಗಿದೆ.

ಕಳೆದ 25 ವರ್ಷಗಳಿಂದ 20 ಗುಂಟೆಯಿಂದ 15ಎಕರೆವರೆಗೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾದ 106 ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಟುಂಬ ಎಸಗಿರುವ ಅಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಯಡಿಯೂರಪ್ಪ ಅವರ ಕುಟುಂಬ ಬೆಂಗಳೂರು, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಹೊಂದಿರುವ ಆಸ್ತಿ ವಿವರಗಳನ್ನು ಸಲ್ಲಿಸಲಾಗಿದೆ.

ಇವರ  ಮಕ್ಕಳ ಕಂಪೆನಿಗಳ ಖಾತೆಗಳಲ್ಲಿ 72 ಕೋಟಿಗೂ ಹೆಚ್ಚಿನ ಹಣ ಠೇವಣಿ ಇಡಲಾಗಿದೆ ಎಂದು ವಿವರಿಸಲಾಗಿದೆ.

ಯಡಿಯೂರಪ್ಪ ಅವರ ವಿರುದ್ಧ ಸಿಇಸಿಗೆ ಸಲ್ಲಿಸಲಾಗಿರುವ ಆರೋಪಗಳು ಈ ಹಿಂದೆ ಪ್ರತ್ಯೇಕವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬಹುತೇಕ ಆರೋಪಗಳನ್ನು ಮಾಡಿ, ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದರು.

ಈಗ ಎಸ್.ಆರ್. ಹಿರೇಮಠ ಈ ಎಲ್ಲ ಆರೋಪಗಳನ್ನು ಒಟ್ಟುಗೂಡಿಸಿ ಸಿಇಸಿಗೆ ಸಲ್ಲಿಸಿದ್ದಾರೆ. ಇದರಿಂದ ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ.

ಸಿಇಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಮಾಜಿ ಮುಖ್ಯಮಂತ್ರಿ ರಾಜಕೀಯ ಭವಿಷ್ಯ ಮತ್ತಷ್ಟು ಅತಂತ್ರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.