ADVERTISEMENT

ಬಿಎಸ್‌ವೈ ಸೇರ್ಪಡೆ ವರಿಷ್ಠರ ಒಲವು

ಕೆಜೆಪಿ–ಬಿಜೆಪಿ ವಿಲೀನಕ್ಕೆ ನಾಳೆ ಸಭೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರಲು ಬಿಜೆಪಿ ಅಧ್ಯಕ್ಷ  ರಾಜನಾಥ್‌ಸಿಂಗ್‌ ಒಲವು ತೋರಿದ್ದು, ಹಿರಿಯ ನಾಯಕರ ಜತೆ ಚರ್ಚಿಸಿ ಶೀಘ್ರ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಬಿಜೆಪಿ ಮುಖಂಡರಾದ ಪ್ರಹ್ಲಾದ ಜೋಶಿ, ಕೆ. ಎಸ್‌. ಈಶ್ವರಪ್ಪ, ಅರವಿಂದ ಲಿಂಬಾವಳಿ, ಅನಂತ ಕುಮಾರ್‌ ಅವರಿಗೆ ರಾಜನಾಥ್‌ಸಿಂಗ್‌ ಗುರುವಾರ ಈ ಆಶ್ವಾಸನೆ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಯಡಿಯೂರಪ್ಪನವರ ಸೇರ್ಪಡೆ ಅನಿವಾರ್ಯ ಎಂದು ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರೋಧಿ ಮತಗಳು ವಿಭಜನೆ ಆಗಿದ್ದೇ ಬಿಜೆಪಿ ಹೀನಾಯ ಸೋಲಿಗೆ ಕಾರಣ. ಈಗಲೂ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಲೋಕಸಭೆ ಚುನಾವಣೆಯಲ್ಲೂ ಸೋಲು ಖಚಿತ ಎಂದು ರಾಜನಾಥ್‌ ಸಿಂಗ್‌ ಅವರಿಗೆ ವಿವರಿಸಿದ್ದಾಗಿ ಪ್ರಹ್ಲಾದ್‌ ಜೋಶಿ ಮತ್ತು ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂಬೈ ಬಿಜೆಪಿ ಸಮಾವೇಶದಲ್ಲೇ ಯಡಿಯೂರಪ್ಪನವರ ಮರು ಸೇರ್ಪಡೆ ಕುರಿತು ಚರ್ಚಿಸಲಾಗಿತ್ತು. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ನಂತರ ಈ ಬಗ್ಗೆ ಚಿಂತಿಸಬಹು­ದೆಂದು ಪಕ್ಷದ ಹಿರಿಯ ನಾಯಕರು ಹೇಳಿದ್ದರು. ಈಗ ಚುನಾವಣೆಗಳು ಮುಗಿದಿರುವುದರಿಂದ ಯಡಿಯೂರ­ಪ್ಪನವರ ಮರು ಸೇರ್ಪಡೆ ವಿಷಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದಿರ­ಬಹುದು. ಆದರೆ, ಅವರು ಅಪರಾಧಿ ಎಂದು ತೀರ್ಮಾನವಾಗಿಲ್ಲ. ಮಾಜಿ ಮುಖ್ಯಮಂತ್ರಿ ಮೇಲಿನ ಆರೋಪ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ಆರೋಪ ಹೊತ್ತವರನ್ನು ಸೇರಿಸಿಕೊಳ್ಳ­ಬಾರದೆಂದು ಪಕ್ಷದ ಸಂವಿಧಾನ ಹೇಳಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

ಷರತ್ತಿಲ್ಲ: ಬಿಜೆಪಿ ಸೇರ್ಪಡೆಗೆ ಮಾಜಿ ಮುಖ್ಯಮಂತ್ರಿ ಯಾವುದೇ ಷರತ್ತು ಹಾಕಿಲ್ಲ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮೆಲ್ಲರ ಒಂದಂಶದ ಕಾರ್ಯ­ಕ್ರಮ. ಹೀಗಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಯಾವುದನ್ನೂ ಅವರು ಕೇಳಿಲ್ಲ ಎಂದು ಈಶ್ವರಪ್ಪ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಲೇಹರ್‌ ಸಿಂಗ್‌, ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಧನಂಜಯ ಕುಮಾರ್‌ ಸೇರ್ಪಡೆ ಕುರಿತು ಪ್ರಸ್ತಾಪ­ವಾ­ಗಲಿಲ್ಲ. ಇವೆಲ್ಲವೂ ಸಣ್ಣಪುಟ್ಟ ವಿಷಯವಾದ್ದರಿಂದ ಪರಿಹಾರ ಕಷ್ಟವಾಗಲಾರದು ಎಂದು ಇಬ್ಬರೂ ನಾಯಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಎಸ್‌ವೈ ಉತ್ಸುಕ: ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಬಿಜೆಪಿಗೆ ಮರಳಿ ಬರಲು ಅವರೂ ಉತ್ಸುಕರಾಗಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ವಿಲೀನದ ಬಗ್ಗೆ ಚರ್ಚಿಸಲು ಬಿಜೆಪಿ ಮುಖಂಡರು ಈ ತಿಂಗಳ 7ರಂದು ಸಭೆ ಸೇರಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ರಾಜ್ಯ ಬಿಜೆಪಿ ಪ್ರಮುಖರ ಸಭೆ ಬಳಿಕ ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಸಂಪರ್ಕಿಸಲಾಗುವುದು. ಈ ತಿಂಗಳ 9ರಂದು ಕೆಜೆಪಿ ನಾಯಕರ ಸಭೆ ನಡೆಯ­ಲಿದೆ. ಅಷ್ಟರೊಳಗೆ ಬಿಜೆಪಿಯೊಳಗಿನ ಬೆಳವಣಿಗೆ ಕುರಿತು ಮಾಜಿ ಮುಖ್ಯಮಂತ್ರಿ ಅವರಿಗೆ ವಿವರಿಸಲಾ­ಗುವುದು ಎಂದರು.

ಡಿಸೆಂಬರ್ ಕೊನೆಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯಲಿದೆ. ಒಂದು ದಿನ ಕಾರ್ಯ­ಕಾರಿಣಿ  ಸಭೆಯಲ್ಲಿ  ಪಾಲ್ಗೊಳ್ಳುವಂತೆ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಲಾಗಿದೆ. ಬಿಜೆಪಿ ಅಧ್ಯಕ್ಷರ  ಭೇಟಿ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಬಿಜೆಪಿಗೆ ಯಡಿಯೂರಪ್ಪ ಮರಳಿದರೆ ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎಂದೂ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT