ADVERTISEMENT

ಬಿಕ್ಕಟ್ಟಿಗೆ ಪರಿಹಾರ: ವರಿಷ್ಠರ ಸುಳಿವು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನವದೆಹಲಿ: ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತಿರುವ ಬಿಜೆಪಿ ಬಿಕ್ಕಟ್ಟನ್ನು ಶೀಘ್ರದಲ್ಲೇ ಪರಿಹಾರ ಮಾಡುವುದಾಗಿ ವರಿಷ್ಠರು ರಾಜ್ಯದ ಸಚಿವರು ಮತ್ತು ಶಾಸಕರನ್ನೊಳಗೊಂಡ ನಿಯೋಗಕ್ಕೆ  ಭರವಸೆ ನೀಡಿದ್ದಾರೆ.

ಸಚಿವರಾದ ವಿಶ್ಚೇಶ್ವರ ಹೆಗಡೆ ಕಾಗೇರಿ, ಬಿ.ಎನ್.ಬಚ್ಚೇಗೌಡ, ಶಾಸಕರಾದ ಶ್ರೀಕಾಂತ ಕುಲಕರ್ಣಿ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ಅಭಯ ಪಾಟೀಲ್ ಅವರನ್ನು ಒಳಗೊಂಡ ನಿಯೋಗ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ರಾಜ್‌ನಾಥ್  ಸಿಂಗ್, ವೆಂಕಯ್ಯ ನಾಯ್ಡು ಮತ್ತು ಅನಂತ ಕುಮಾರ್ ಅವರನ್ನು ಭೇಟಿ ಮಾಡಿ ತಕ್ಷಣ ಬಿಕ್ಕಟ್ಟು ಪರಿಹಾರ ಮಾಡುವಂತೆ ಮನವಿ ಮಾಡಿತು.

 ರಾಜ್ಯ ಬಿಜೆಪಿಯ ಪ್ರತಿಯೊಂದು ಬೆಳವಣಿಗೆಯನ್ನು ನಿಯೋಗ ನಾಯಕರಿಗೆ ವಿವರಿಸಿತು. ಎಲ್ಲವನ್ನು ಮುಖಂಡರು ಸಂಯಮದಿಂದ ಕೇಳಿಸಿಕೊಂಡರು. ಆದರೆ, ಬಿಕ್ಕಟ್ಟನ್ನು ಹೇಗೆ  ಪರಿಹಾರ ಮಾಡಲಾಗುವುದೆಂಬ ಗುಟ್ಟು ಬಿಡಲಿಲ್ಲ. ಸದಾನಂದಗೌಡರ ನಾಯಕತ್ವ ಬದಲಾವಣೆ ಅಥವಾ ಯಡಿಯೂರಪ್ಪ ಅವರ ಮರು ನೇಮಕ ಕುರಿತು ಯಾವುದೇ ಸುಳಿವು ನೀಡಲಿಲ್ಲ  ಎಂದು ವಿಶ್ವಸನೀಯ ಮೂಲಗಳು ಸ್ಪಷ್ಟಪಡಿಸಿವೆ.

ನಿಯೋಗದಲ್ಲಿದ್ದ ಒಂದಿಬ್ಬರು ಸದಾನಂದಗೌಡ ಮತ್ತು ಈಶ್ವರಪ್ಪ ಅವರನ್ನು ಬದಲಾವಣೆ ಮಾಡದೆ ಯಡಿಯೂರಪ್ಪ ಅವರಿಗೆ ಮತ್ಯಾವುದಾದರೂ ಹೊಣೆಗಾರಿಕೆ ವಹಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂಬ ಸಲಹೆ ಮುಂದಿಟ್ಟರು. ಈ ಮಾತನ್ನು ವರಿಷ್ಠರು ಕೇಳಿಸಿಕೊಂಡರೆ ವಿನಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಂಘ-ಪರಿವಾರದ ಹಿನ್ನೆಲೆಯಲ್ಲಿ ಬೆಳೆದುಬಂದಿರುವ ಒಂದಿಬ್ಬರು ಬಿಜೆಪಿ ಪಕ್ಷ ಮತ್ತು ಸರ್ಕಾರದಲ್ಲಿ ನೀತಿ- ಸಿದ್ಧಾಂತ ಎಳ್ಳಷ್ಟೂ ಉಳಿದಿಲ್ಲ ಎಂದು ವಿಷಾದಿಸಿದರು.

`ನಾವು ಯಾರ ಪರ ವಕಾಲತ್ತು ವಹಿಸಲು ದೆಹಲಿಗೆ ಬಂದಿಲ್ಲ. ಬಿಜೆಪಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಮಾಡುತ್ತಿರುವ ಬಿಕ್ಕಟ್ಟನ್ನು ಪರಿಹಾರ ಮಾಡುವಂತೆ ಮನವಿ ಮಾಡಲು ಬಂದಿದ್ದೇವೆ. ನಾಯಕತ್ವ ಕುರಿತು ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಪಕ್ಷ- ಸರ್ಕಾರದ ಹಿತದೃಷ್ಟಿಯಿಂದ ಸರಿಯಾದ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ  ಎಂಬ ವಿಶ್ವಾಸವಿದೆ~ ಎಂದು ಮೂಲಗಳು ಹೇಳಿವೆ.

ಸಂಸತ್ ಹಾಗೂ ವಿಧಾನಮಂಡಲದ ಅಧಿವೇಶನದ ಬಳಿಕ ಬಿಜೆಪಿ ವರಿಷ್ಠರು ಒಟ್ಟಿಗೆ ಕುಳಿತು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಮತ್ತೊಂದು ಸಚಿವರು ಮತ್ತು ಶಾಸಕರ ನಿಯೋಗ ಈಚೆಗೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಸದಾನಂದಗೌಡರ ನಾಯಕತ್ವ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.