ADVERTISEMENT

ಬಿಜೆಡಿ ಶಾಸಕನ ಅಪಹರಣ: ಉಗ್ರರ ಜೊತೆಗಿನ ಮಾತುಕತೆ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 9:10 IST
Last Updated 24 ಮಾರ್ಚ್ 2012, 9:10 IST

ಭುವನೇಶ್ವರ (ಐಎಎನ್ಎಸ್): ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಶಾಸಕ ಜ್ಹೀನಾ ಹಿಕಾಕ ಅವರ  ಅಪಹರಣ ಹಾಗೂ ಮಾವೋವಾದಿಗಳಿಂದ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಬ್ಬರು ಇಟೆಲಿ ಪ್ರಜೆಗಳ ಬಿಡುಗಡೆಗಾಗಿ ಬಂಡುಕೋರರ ಜೊತೆ ನಡೆಸುತ್ತಿದ್ದ  ಮಾತುಕತೆಗಳನ್ನು ಶನಿವಾರ ಅಮಾನತುಗೊಳಿಸಲಾಗಿದೆ.

ಸತತ ಮೂರನೇ ದಿನ ಹಲವಾರು ಗಂಟೆಗಳ ಮಾತುಕತೆ ಬಳಿಕ ಸರ್ಕಾರಿ ನೇಮಿತ ಮಧ್ಯವರ್ತಿಗಳು ಮತ್ತು ಮಾವೋವಾದಿ ಸಂಧಾನಕಾರರು ಸಂಧಾನ ಮಾತುಕತೆ ಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೆ ಈ ಮಾತುಕತೆ ಅಮಾನತು ತಾತ್ಕಾಲಿಕ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಶಾಸಕನ ಅಪಹರಣ: ಒಡಿಶಾದ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ) ಶಾಸಕ ಜ್ಹೀನಾ ಹಿಕಾಕ (37) ಅವರನ್ನು ಮಾವೋವಾದಿಗಳು ಶನಿವಾರ ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 100-150 ಸಂಖ್ಯೆಯಲ್ಲಿದ್ದ ಸಶಸ್ತ್ರಧಾರಿ ಬಂಡುಕೋರರು ಹಿಕಾಕಾ ಅವರನ್ನು ರಾಜಧಾನಿಯಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ಕೋರಾಪತ್ ಮತ್ತು ಲಕ್ಷ್ಮೀಪುರ ನಡುವಣ ಗುಡ್ಡಗಾಡು ಪ್ರದೇಶದಿಂದ ಅಪಹರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸೂರ್ಯಮಣಿ ಪ್ರಧಾನ್ ಅವರು ಐಎಎನ್ ಎಸ್ ಗೆ ತಿಳಿಸಿದರು.

ಆದರೆ ಬಂಡುಕೋರರು ವಾಹನದ ಚಾಲಕ ಹಾಗೂ ಶಾಸಕರ ಅಂಗರಕ್ಷಕನನ್ನು ಗಾಯಗೊಳಿಸದೇ ಬಿಟ್ಟು ಬಿಟ್ಟಿದ್ದಾರೆ. ಇವರಿಬ್ಬರನ್ನು ಪ್ರಶ್ನಿಸಿದ ಬಳಿಕವಷ್ಟೇ ಹೆಚ್ಚಿನ ವಿವರಗಳು ಲಭ್ಯವಾಗಬಹುದು ಎಂದು ಪ್ರಧಾನ್ ಹೇಳಿದರು.

ಕಳೆದ ಒಂದು ವಾರದಿಂದ ಇಟೆಲಿಯ ಇಬ್ಬರನ್ನು ಮಾವೋವಾದಿಗಳು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದು, ಬೆನ್ನಲ್ಲೇ ಬಿಜೆಡಿ ಶಾಸಕನ ಅಪಹರಣ ನಡೆದಿರುವುದು  ಹೆಚ್ಚಿನ ಕುತೂಹಲ, ಆತಂಕಕ್ಕೆ ಕಾರಣವಾಗಿದೆ. ಇಟೆಲಿ ಪ್ರಜೆಗಳ ಬಿಡುಗಡೆ ಸಲುವಾಗಿ ಸರ್ಕಾರ ಮಧ್ಯವರ್ತಿಗಳ ಮೂಲಕ ಮಾವೋವಾದಿಗಳ ಜೊತೆ ಸಂಧಾನ ನಿರತವಾಗಿದೆ.

ಅಪಹರಣಕಾರರು ವಾಹನದಲ್ಲಿ ಕರಪತ್ರಗಳನ್ನು ಬಿಟ್ಟುಹೋಗಿದ್ದು, ಈ ಕರಪತ್ರಗಳಲ್ಲಿ ಉಗ್ರಗಾಮಿಗಳು ಇಟೆಲಿ ಪ್ರಜೆಗಳ ಬಿಡುಗಡೆಗೆ 13 ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಅವುಗಳನ್ನು ಅತಿ ಶೀಘ್ರವಾಗಿ ಪೂರೈಸಬೇಕು ಎಂದು ಸೂಚಿಸಿದ್ದಾರೆ.

ಇಟೆಲಿ ಪ್ರಜೆಗಳಾದ ಬೊಸಾಸ್ಕೊ ಪಾವ್ಲೋ (54) ಮತ್ತು ಕ್ಲಾಡಿಯೋ ಕೊಲಾಂಜೆಲೊ (61) ಅವರನ್ನು ಉಗ್ರಗಾಮಿಗಳು ಮಾರ್ಚ್ 14ರಂದು ಕಂಧಮಲ್ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಗಂಜಂ ಗಡಿಪ್ರದೇಶದಿಂದ ಅಪಹರಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT