ADVERTISEMENT

ಬಿಜೆಡಿ ಶಾಸಕನ ಹತ್ಯೆಗೆ ರಾಜ್ಯ ಸರ್ಕಾರವೇ ಹೊಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 9:15 IST
Last Updated 25 ಸೆಪ್ಟೆಂಬರ್ 2011, 9:15 IST

ಭುವನೇಶ್ವರ/ ಒಡಿಶಾ, (ಪಿಟಿಐ): ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತಾರೂಢ ಬಿಜೆಡಿಯ ಶಾಸಕ ಜಗಬಂಧು ಮಜ್ಹಿ ಅವರ ಹತ್ಯೆಯಾಗಿರುವುದನ್ನು ಖಂಡಿಸಿರುವ ವಿರೋಧ ಪಕ್ಷಗಳು ಶಾಸಕನ ಹತ್ಯೆಗೆ ಬಿಜೆಡಿ ಸರ್ಕಾರವೇ ಹೊಣೆ ಎಂದು ಭಾನುವಾರ ಆರೋಪಿಸಿವೆ.

ಮವೋವಾದಿಗಳ ಪ್ರಭಾವವಿರುವ ಪ್ರದೇಶದಲ್ಲಿ ಶಾಸಕರಿಗೆ ಒದಗಿಸಿರುವ ಭದ್ರತೆಯು ಅಸಮರ್ಪಕವಾಗಿದ್ದು, ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿರುವುದು ಈ ಘಟನೆಯಿಂದ ತಿಳಿಯುತ್ತದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ದೂರಿದೆ.

ಶಾಸಕರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ವೈಫಲ್ಯಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆ ಹೊಣೆಹೊರಬೇಕು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ  ಭೂಪೇಂದ್ರ ಸಿಂಗ್ ಆರೋಪಿಸಿದ್ದಾರೆ.

ಶಾಸಕ ಜಗಬಂಧು ಮಜ್ಹಿ ಮತ್ತು ಅವರ ಭದ್ರತಾ ಸಿಬ್ಬಂದಿ ಹತ್ಯೆಗೆ ಸರ್ಕಾರವೇ ಕಾರಣ ಎಂದಿರುವ  ರಾಜ್ಯ ಬಿಜೆಪಿ ಅಧ್ಯಕ್ಷ ಜೂಲ್ ಒರಮ್, ಸಾಮಾನ್ಯ ಜನರ ಜೀವಕ್ಕೆ ಕೂಡ ಸೂಕ್ತ ಭದ್ರತೆ ಇಲ್ಲದಿರುವುದು ಈ ಘಟನೆಯಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಚುನಾಯಿತ ಪ್ರತಿನಿಧಿಯನ್ನು ರಕ್ಷಿಸುವಲ್ಲಿ ವಿಫಲವಾದ ಈ ಸರ್ಕಾರ, ಹೇಗೆ ತಾನೆ ಸಾರ್ವಜನಿಕರಿಗೆ ಭದ್ರತೆಯನ್ನು ಒದಗಿಸುತ್ತದೆ? ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ದಿಬಾಕರ್ ನಾಯಕ್ ಪ್ರಶ್ನಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.