ADVERTISEMENT

ಬಿಜೆಡಿ ಶಾಸಕ ಜಿನಾ ಹಿಕಾಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST
ಬಿಜೆಡಿ ಶಾಸಕ ಜಿನಾ ಹಿಕಾಕ ಬಿಡುಗಡೆ
ಬಿಜೆಡಿ ಶಾಸಕ ಜಿನಾ ಹಿಕಾಕ ಬಿಡುಗಡೆ   

ಭುವನೇಶ್ವರ (ಪಿಟಿಐ): ಒಡಿಶಾ ಆಡಳಿತ ಪಕ್ಷ ಬಿಜೆಡಿಯ ಶಾಸಕ ಜಿನಾ ಹಿಕಾಕ ಅವರನ್ನು ಮಾವೊವಾದಿಗಳು ಗುರುವಾರ ಕೊರಾಪುಟ್ ಜಿಲ್ಲೆಯ ಬಲಿಪೇಟ್ ಗ್ರಾಮದಲ್ಲಿ ಬಿಡುಗಡೆ ಮಾಡಿದ್ದರಿಂದ 33 ದಿನಗಳ ಅಪಹರಣ ಪ್ರಕರಣವು ಸುಖಾಂತ್ಯ ಕಂಡಿದೆ.

ಹಸಿರು ಕುರ್ತಾ ಮತ್ತು ಪೈಜಾಮಾ ಧರಿಸಿದ್ದ ಹಿಕಾಕ ಅವರನ್ನು  ಆದಿವಾಸಿ ಯುವಕರು ಪತ್ನಿ ಕೌಶಲ್ಯಾ ಮತ್ತು ವಕೀಲ ನಿಹಾರ್ ರಂಜನ್ ಪಟ್ನಾಯಿಕ್ ಅವರ ವಶಕ್ಕೆ ಒಪ್ಪಿಸಿದರು.

`ನನಗೆ ಬೆಂಬಲ ನೀಡಿದ  ಆದಿವಾಸಿಗಳು ಮತ್ತು ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಪತಿಯನ್ನು ನೋಡಲು ಕಾತರಿಸಿದ್ದೆ~ ಎಂದು ಅವರ ಪತ್ನಿ  ತಿಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಹಾಜರಿದ್ದ ವೈದ್ಯರ ತಂಡವು ಹಿಕಾಕ ಅವರ ಆರೋಗ್ಯವನ್ನು ಪರೀಕ್ಷಿಸಿತು.
ಹಿಕಾಕ ಅವರ ಬಿಡುಗಡೆಯನ್ನು ಗೃಹ ಕಾರ್ಯದರ್ಶಿ ಯು. ಎನ್. ಬೆಹೆರಾ ಅವರು ಅಧಿಕೃತವಾಗಿ ಪ್ರಕಟಿಸಿದರು.

ಹಿಕಾಕ ಅವರು ಶಾಸಕ ಸ್ಥಾನಕ್ಕೆ ಮತ್ತು ಬಿಜೆಡಿ ಪಕ್ಷಕ್ಕೆ ರಾಜೀನಾಮೆ ನೀಡಿ ಜನರಿಗಾಗಿ ಕೆಲಸ ಮಾಡುವುದಾಗಿ ಲಿಖಿತ ಭರವಸೆ  ನೀಡಿದ್ದಾರೆ ಎಂದು ಅವರನ್ನು ಅಪಹರಿಸಿದ್ದ ಆಂಧ್ರ-ಒಡಿಶಾ ಗಡಿಯ ವಿಶೇಷ ಪ್ರಾದೇಶಿಕ ಸಮಿತಿಯು ತಿಳಿಸಿದೆ.

ಬಿಡುಗಡೆಯ ನಂತರ ಮುಗುಳ್ನಗುತ್ತಿದ್ದ ಹಿಕಾಕ ಅವರು, `ನಾನು ಈಗ ಸ್ವತಂತ್ರನಾಗಿದ್ದು ಆರೋಗ್ಯವಾಗಿದ್ದೇನೆ. ಮಾವೊವಾದಿಗಳು ನನಗೆ ಯಾವುದೇ ರೀತಿಯ ತೊಂದರೆ ಕೊಡದೆ ಚೆನ್ನಾಗಿ ನೋಡಿಕೊಂಡರು~ ಎಂದು ತಿಳಿಸಿದರು.

`ಮಾವೊವಾದಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದೊಯ್ಯುತ್ತಿದ್ದರು, ನನ್ನನ್ನು ಎಲ್ಲಿ ಇಡಲಾಗಿತ್ತು ಎಂಬುದು ಗೊತ್ತಾಗಲಿಲ್ಲ~ ಎಂದು ಹಿಕಾಕ ಹೇಳಿದರು.

ಬಂಧನದಲ್ಲಿರುವ 29 ಮಂದಿಯನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದ ಮಾವೊವಾದಿಗಳು, ಸರ್ಕಾರದ ಸಂಧಾನಕಾರರ ಜತೆ ಮಾತುಕತೆ ನಡೆಸಲು ನಿರಾಕರಿಸಿದ್ದರು ಮತ್ತು ಶಾಸಕರ ಬಿಡುಗಡೆಯ ಗಡುವು ವಿಸ್ತರಿಸಿದ್ದರು.

ಮಾವೊವಾದಿಗಳ ಬೇಡಿಕೆಗಳನ್ನು  ಪೂರ್ತಿ ಈಡೇರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ ನಂತರ, ಶಾಸಕರನ್ನು ಪ್ರಜಾ ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪ್ರಕಟಿಸಲಾಗಿತ್ತು.

`ಶಾಸಕ ಸ್ಥಾನ ಹಾಗೂ ಪಕ್ಷ ತ್ಯಜಿಸುವ ಬಗ್ಗೆ ಮಾವೊವಾದಿಗಳಿಗೆ ಭರವಸೆ ನೀಡಿದ್ದೀರಾ~ ಎಂಬ ವರದಿಗಾರರ ಪ್ರಶ್ನೆಗೆ, `ಮುಂದಿನ ದಿನಗಳಲ್ಲಿ ಈ ಬಗ್ಗೆ ನಿಮಗೆ ತಿಳಿದುಬರಲಿದೆ~ ಎಂದಷ್ಟೇ ಹಿಕಾಕ ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.