ಲಖನೌ/ನವದೆಹಲಿ (ಪಿಟಿಐ/ ಐಎಎನ್‌ಎಸ್): ಗುಜರಾತ್ ಪ್ರವಾಸ ಕೈಗೊಂಡಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಬಿಜೆಪಿ ಹಾಗೂ ಎಎಪಿ ಕಾರ್ಯಕರ್ತರ ನಡುವೆ ಬುಧವಾರ ಲಖನೌ ಹಾಗೂ ನವದೆಹಲಿಯಲ್ಲಿ ಘರ್ಷಣೆ ಉಂಟಾಯಿತು.
ಲಖನೌ ವಿಧಾನಸಭಾ ಮಾರ್ಗದಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿ ಮುಂದೆ ಎಎಪಿ ಕಾರ್ಯಕರ್ತರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ ವೇಳೆ ಬಿಜೆಪಿ–ಎಎಪಿ ಕಾರ್ಯಕರ್ತರ ನಡುವೆ ಘರ್ಷಣೆಯಾಯಿತು.
ಬಿಜೆಪಿ ಕಚೇರಿ ಮೇಲೆ ಎಎಪಿ ಕಾರ್ಯಕರ್ತರು ಇಟ್ಟಿಗೆ ತೂರಿದಾಗ, ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಲಾಠಿ ಹಾಗೂ ಕಬ್ಬಿನ ಜಲ್ಲೆಗಳ ಮೂಲಕ ರಸ್ತೆಯಲ್ಲೇ ಘರ್ಷಣೆಗೆ ಇಳಿದರು.
ಘಟನೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರನ್ನು ಥಳಿಸಿದರು. ಕೆಲ ಕಾರ್ಯಕರ್ತರ ಬಟ್ಟೆ ಹರಿದರೆ, ಇನ್ನು ಕೆಲ ಕಾರ್ಯಕರ್ತರ ಮೇಲೆ ತೀವ್ರ ಹಲ್ಲೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಎಎಪಿಯ ರಾಷ್ಟ್ರೀಯ ಮಂಡಳಿ ಸದಸ್ಯೆ ವೈಭವ್ ಮಹೇಶ್ವರಿ ಮಾತನಾಡಿ, ‘ನಮ್ಮ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಬಿಜೆಪಿ ಕಾರ್ಯಕರ್ತರು ಕಚೇರಿಯ ಒಳಗಿನಿಂದಲೇ ಏಕಾಏಕಿ ನಮ್ಮ ಮೇಲೆ ಇಟ್ಟಿಗೆ ತೂರಿದರು’ ಎಂದು ಆರೋಪಿಸಿದ್ದಾರೆ.
ಘಟನೆಯಲ್ಲಿ ಎಎಪಿ ಕಾರ್ಯಕರ್ತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಐವರಿಗೆ ತೀವ್ರ ಗಾಯಗಳಾಗಿವೆ ಎಂದು ಅವರು ದೂರಿದರು.
ಬಿಜೆಪಿ ವಕ್ತಾರ ವಿಜಯ್ ಪಾಠಕ್ ಮಾತನಾಡಿ, ಬಿಜೆಪಿ ಕಚೇರಿಯ ಹೊರಗೆ ನಿಂತಿದ್ದ ಕಾರ್ಯಕರ್ತರ ಮೇಲೆ ಎಎಪಿ ಕಾರ್ಯಕರ್ತರು ಇಟ್ಟಿಗೆ ತೂರಿ ದಾಳಿ ಮಾಡಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಎಂದು ಹೇಳಿದ್ದಾರೆ.
ಈ ಮಧ್ಯೆ ಹಿಂಸಾಚಾರದ ಬಗ್ಗೆ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.