ADVERTISEMENT

ಬಿಜೆಪಿ ಅಧ್ಯಕ್ಷರಾಗಿ ಮತ್ತೆ ಅಮಿತ್‌ ಷಾ ಆಯ್ಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ಬಿಜೆಪಿ ಅಧ್ಯಕ್ಷರಾಗಿ ಮತ್ತೆ ಅಮಿತ್‌ ಷಾ ಆಯ್ಕೆ ಸಾಧ್ಯತೆ
ಬಿಜೆಪಿ ಅಧ್ಯಕ್ಷರಾಗಿ ಮತ್ತೆ ಅಮಿತ್‌ ಷಾ ಆಯ್ಕೆ ಸಾಧ್ಯತೆ   

ನವದೆಹಲಿ (ಪಿಟಿಐ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದಿನ ವಾರ ನಡೆಯಲಿದ್ದು, ಅಮಿತ್‌ ಷಾ ಅವರು ಮತ್ತೆ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಅಧ್ಯಕ್ಷೀಯ ಚುನಾವಣೆಯ ಅಧಿಸೂಚನೆಯನ್ನು ಪಕ್ಷವು ಬುಧವಾರ ಹೊರಡಿಸಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಜನವರಿ 24ರಂದು  ಸಲ್ಲಿಸಬಹುದು. ಅನಿವಾರ್ಯ ಎನಿಸಿದರೆ ಜನವರಿ 25ರಂದು ಚುನಾವಣೆ ನಡೆಯಲಿದೆ. ಷಾ ಅವರ ಅಧಿಕಾರದ ಅವಧಿ ಶನಿವಾರ (ಜ.23) ಕೊನೆಗೊಳ್ಳಲಿದೆ. ಅವರು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಷಾ ಅವರನ್ನು ಪೂರ್ಣಾವಧಿಗೆ ಅಧ್ಯಕ್ಷರಾಗಿ ಮುಂದುವರಿಸುವುದಕ್ಕೆ ಆರ್‌ಎಸ್‌ಎಸ್‌ ಬೆಂಬಲ ಸೂಚಿಸಿದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರೂ ಬೆಂಬಲಿಸಿದ್ದಾರೆ’ ಎಂದು  ಹೇಳಿವೆ.

‘ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಜ. 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸಲ್ಲಿಸಬಹುದು. ಮಧ್ಯಾಹ್ನ 1ರಿಂದ 1.30ರ ಅವಧಿಯಲ್ಲಿ ನಾಮಪತ್ರಗಳ ಪರಿಶೀಲನೆ ಮತ್ತು ವಾಪಸ್‌ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಅನಿವಾರ್ಯ ಎನಿಸಿದರೆ ಜ. 25ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ಅವಧಿಯಲ್ಲಿ ಚುನಾವಣೆ ನಡೆಯಲಿದೆ’ ಎಂದು ಚುನಾವಣಾ ಅಧಿಕಾರಿ ಅವಿನಾಶ್‌ ರೈ ಖನ್ನಾ ತಿಳಿಸಿದ್ದಾರೆ.

2014ರ ಜುಲೈ 9 ರಂದು ಷಾ  ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದೆ ಅಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್‌ ಕೇಂದ್ರ ಸಂಪುಟ ಸೇರಿದ್ದರು. ಆದ್ದರಿಂದ ಉಳಿದ ಅವಧಿಯನ್ನು ಷಾ ಪೂರೈಸಿದ್ದಾರೆ.

ಬಿಜೆಪಿ ಹೈಕಮಾಂಡ್‌ 20 ರಾಜ್ಯಗಳ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಇನ್ನೂ 5 ರಾಜ್ಯಗಳ ಅಧ್ಯಕ್ಷರ ನೇಮಕ ಸದ್ಯದಲ್ಲೇ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT