ADVERTISEMENT

ಬಿಜೆಪಿ ವಿರುದ್ಧ `ಸಿಕ್ಸರ್ ಸಿಧು' ಗರಂ

ನಿವೃತ್ತಿಗೆ ಚಿಂತನೆ: ಕೋಪ ಶಮನಕ್ಕೆ ರಾಜನಾಥ್ ಯತ್ನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದ್ದು ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿರುವ ಮಾಜಿ ಕ್ರಿಕೆಟಿಗ ಮತ್ತು ಅಮೃತಸರದ ಸಂಸದ ನವಜೋತ್ ಸಿಂಗ್ ಸಿಧು ಅವರ ಕೋಪವನ್ನು ಶಮನಗೊಳಿಸುವ ಯತ್ನಗಳು ಆರಂಭವಾಗಿವೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇರವಾಗಿ ಸಿಧು ಅಸಮಾಧಾನ ಶಮನಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಶುಕ್ರವಾರ ಬೆಳಿಗ್ಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿರುವ ರಾಜನಾಥ್, ಪರಿಹಾರ ಕಂಡುಹಿಡಿಯುವ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸದ್ಯ ಐಪಿಎಲ್ ಪಂದ್ಯಾವಳಿಯಲ್ಲಿ ವೀಕ್ಷಕ ವಿವರಣೆಗಾರರಾಗಿರುವ ಸಿಧು ಅವರಿಗೆ ಬಿಡುವಿಲ್ಲದ ಕಾರಣ ಪಂದ್ಯಾವಳಿ ಮುಗಿದ ನಂತರ ನವದೆಹಲಿಯಲ್ಲಿ ರಾಜನಾಥ್ ಸಿಂಗ್ ಅವರನ್ನು ಕಂಡು ಚರ್ಚಿಸಲಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಅವರು ತಕ್ಷಣಕ್ಕೆ ಲಭ್ಯರಾಗಿಲ್ಲ.

ಸಿಕ್ಸರ್ ಸಿಧು ಸಿಟ್ಟಿಗೆ ಕಾರಣವೇನು?: ನಿತಿನ್ ಗಡ್ಕರಿ ಪಕ್ಷದ ಅಧ್ಯಕ್ಷರಾಗಿದ್ದಾಗ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಧು ಅವರ ಹೆಸರನ್ನು ರಾಜನಾಥ್ ಸಿಂಗ್ ಇತ್ತೀಚೆಗೆ  ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಟ್ಟಿದ್ದರು. ಈ ಬೆಳವಣಿಗೆಯೇ ಮಾಜಿ ಕ್ರಿಕೆಟಿಗನ ಕೋಪಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಭಾಮೈದನಾಗಿರುವ ಸಚಿವ ಬಿಕ್ರಂಜಿತ್ ಸಿಂಗ್ ಮಜಿಥಾಯ್ ಹಾಗೂ ಇತರ ಸ್ಥಳೀಯ ಅಕಾಲಿದಳದ ನಾಯಕರೊಂದಿಗೆ `ಸಿಕ್ಸರ್ ಸಿಧು' ಸಂಬಂಧ ಹಳಿಸಿದೆ. ಇದೇ ಕಾರಣಕ್ಕೆ ತಾವು ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದ ಕ್ಷೇತ್ರ ಬದಲಿಸಲು ಅವರು ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ಬಿಜೆಪಿ ಹೈಕಮಾಂಡ್ ಪೂರಕವಾಗಿ ಸ್ಪಂದಿಸದಿರುವುದು ಕೂಡ ಅವರ ಕೋಪಕ್ಕೆ ಮತ್ತೊಂದು ಕಾರಣ ಎಂದು ತಿಳಿದುಬಂದಿದೆ.

`ಮೊದಲಿನ ಆಸಕ್ತಿ ಉಳಿದಿಲ್ಲ':  `ಪಕ್ಷ ಕಡೆಗಣೆಸಿರುವ ಕಾರಣ ನನ್ನ ಪತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಅನೇಕ ದಿನಗಳ ಹಿಂದೆಯೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜಕೀಯದಲ್ಲಿ ಈಗ ಅವರಿಗೆ ಮೊದಲಿನ ಆಸಕ್ತಿ ಉಳಿದಿಲ್ಲ' ಎಂದು  ನವಜೋತ್ ಸಿಂಗ್ ಪತ್ನಿ ನವಜೋತ್ ಕೌರ್ ಗುರುವಾರ `ಫೇಸ್‌ಬುಕ್'ನಲ್ಲಿ ಬರೆದಿದ್ದರು.

`ಬಿಜೆಪಿಯಲ್ಲಿಯ ಉಸಿರುಗಟ್ಟಿಸುವ ವಾತಾವರಣದಿಂದಾಗಿ ನವಜೋತ್ ಸಿಂಗ್ ಈಗೀಗ ಕ್ರಿಕೆಟ್ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಶಕಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವವರಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಹೀಗಾಗಿ ಅವರಿಗೆ ಗೌರವ ಸಿಗುವ ಕಿಕ್ರೆಟ್ ಕ್ಷೇತ್ರಕ್ಕೆ ಅವರು ಮರಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜಕೀಯ ತೊರೆದು ಕ್ರಿಕೆಟ್ ವೀಕ್ಷಕ ವಿವರಣೆ ಮತ್ತು ಟಿವಿ ಕಾರ್ಯಕ್ರಮಗಳನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸುವರು' ಎಂದೂ ಕೌರ್ ಬರೆದಿದ್ದರು. ಇದು ಬಿಜೆಪಿಯಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು. 

2008ರಲ್ಲಿ ಅಮೃತಸರ (ಪೂರ್ವ) ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ಕೌರ್, ಪಕ್ಷದ ನಾಯಕತ್ವದ ವಿರುದ್ಧ ವೈಯಕ್ತಿಕವಾಗಿಯೂ ಸಿಟ್ಟನ್ನೂ ಹೊರಹಾಕಿದ್ದರು. ತಾವೂ ಗಂಡನ ಹಾದಿಯನ್ನೇ ಹಿಡಿಯುವುದಾಗಿ ಯೂ ಸ್ಪಷ್ಟಪಡಿಸಿದ್ದರು. `ನಮ್ಮನ್ನು ನಂಬಿದ ಕ್ಷೇತ್ರದ ಜನರಿಗೆ ಮಾತ್ರ ನಾವು ನಿಷ್ಠರಾಗಿರುತ್ತೇವೆ' ಎನ್ನುವ ಮೂಲಕ ಅವರು, `ಪಕ್ಷ ನಿಷ್ಠೆ'ಯ ಬಗ್ಗೆ ಪರೋಕ್ಷವಾಗಿ ತಮ್ಮ ನಿಲುವನ್ನು ಹೊರಹಾಕಿದ್ದರು. ಇದರೊಂದಿಗೆ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.