ADVERTISEMENT

ಬಿಡುಗಡೆ ನಿರ್ಧಾರಕ್ಕೆ ಸರ್ವ ಸಮ್ಮತಿ

ಚುನಾವಣೆ ಮತ ಗಳಿಕೆ ತಂತ್ರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2014, 19:30 IST
Last Updated 19 ಫೆಬ್ರುವರಿ 2014, 19:30 IST
ಬಿಡುಗಡೆ ನಿರ್ಧಾರಕ್ಕೆ ಸರ್ವ ಸಮ್ಮತಿ
ಬಿಡುಗಡೆ ನಿರ್ಧಾರಕ್ಕೆ ಸರ್ವ ಸಮ್ಮತಿ   

ಚೆನ್ನೈ (ಪಿಟಿಐ): ರಾಜೀವ್ ಹಂತಕರ ಬಿಡು­ಗಡೆ ತಮಿಳರಿಗೆ ಭಾವನಾತ್ಮಕ ವಿಷಯ. ಇದು ಮುಂದಿನ ಲೋಕಸಭೆ ಚುನಾ­ವ­ಣೆ ಮೇಲೆ ಮಹತ್ವದ ಪರಿ­ಣಾಮ ಬೀರಬಹುದು ಎಂಬ ನಿರೀಕ್ಷೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಗಾಗಿಯೇ ಕಾಂಗ್ರೆಸ್‌ ಹೊರ­ತು­­ಪಡಿಸಿ ತಮಿಳುನಾಡಿನ ಎಲ್ಲ ಪಕ್ಷ­ಗಳೂ ಬಿಡುಗಡೆ ನಿರ್ಧಾರವನ್ನು ಸ್ವಾಗತಿಸಿವೆ. ಈ ನಿರ್ಧಾರಕ್ಕಾಗಿ ತಮ್ಮ ಬದ್ಧ ರಾಜಕೀಯ ವೈರಿ ತಮಿಳನಾಡು ಮುಖ್ಯ­ಮಂತ್ರಿ ಜಯಲಲಿತಾ ಅವ­ರನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಶ್ಲಾಘಿಸಿದ್ದಾರೆ.
ರಾಜೀವ್‌ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಮೊದಲೇ ಆಗ್ರಹಿಸಿತ್ತು. ಆದರೆ ಈ ಬೇಡಿಕೆಯನ್ನೇ ಬುಧವಾರ ಜಯ ಅವರು ಲೇವಡಿ ಮಾಡಿದ್ದಾರೆ.

ರಾಜೀವ್‌ ಹಂತಕರ ಗಲ್ಲು ಶಿಕ್ಷೆ­ಯನ್ನು ಜೀವಾವಧಿಯಾಗಿ ಪರಿವರ್ತಿ­ಸ­ಬೇಕು ಎಂದು 2011ರಲ್ಲಿ ವಿಧಾನ­ಭೆ­ಯಲ್ಲಿ ನಿರ್ಣಯ ಅಂಗೀಕರಿಸಲಾ­ಗಿತ್ತು. ಆದರೆ ಈ ನಿಟ್ಟಿನಲ್ಲಿ ಡಿಎಂಕೆ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ ಎಂದು ಜಯಾ ಆರೋಪಿಸಿದರು.

ಚಿದಂಬರಂ ಎಚ್ಚರಿಕೆ ನಡೆ: ತಮಿಳು­ನಾ­ಡಿ­ನವರೇ ಆದ ಕೇಂದ್ರ ಹಣಕಾಸು ಸಚಿವ ಚಿದಂಬರಂ ‘ರಾಜೀವ್‌ ಹಂತ­ಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿ­ವರ್ತಿ­­ಸಿರುವುದು ಅತೃಪ್ತಿ ಉಂಟು ಮಾಡಿದೆ ಎಂದು ಹೇಳಲು ಸಾಧ್ಯ­ವಿಲ್ಲ. ಆದರೆ ರಾಜೀವ್‌ ಗಾಂಧಿ ಹತ್ಯೆ ಇಂದಿಗೂ ಭರಿಸಲಾಗದ ನೋವಾ­ಗಿಯೇ ಉಳಿದುಕೊಂಡಿದೆ’ ಎಂದು ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ.

‘ಸುಪ್ರೀಂ’ ತೀರ್ಪಿಗೆ ಬದ್ಧ: ಸಿಬಲ್‌
ರಾಜೀವ್‌ ಹಂತಕರ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ ನಿರ್ಧಾರಕ್ಕೆ ಬದ್ಧ ಎಂದು ಕಾನೂನು ಸಚಿವ ಕಪಿಲ್‌ ಸಿಬಲ್‌ ಹೇಳಿದ್ದಾರೆ.

‘ರಾಜೀವ್‌ ಹಂತಕರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂಬುದು ಅಟಾರ್ನಿ ಜನರಲ್‌ ಅಭಿಪ್ರಾಯವಾ­ಗಿದೆ. ಈಗ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ನಮಗೆ ಒಪ್ಪಿಗೆ ಇರಲಿ, ಬಿಡಲಿ ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಸಿಬಲ್‌ ಅಭಿಪ್ರಾಯಪಟ್ಟಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT