ADVERTISEMENT

ಬಿಸಿಯೂಟ ಸೇವನೆ 11 ಮಕ್ಕಳ ಸಾವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಛಾಪ್ರಾ / ಬಿಹಾರ (ಪಿಟಿಐ): ಮಧ್ಯಾಹ್ನದ ಬಿಸಿಯೂಟ ಸೇವಿಸಿದ 11 ಮಕ್ಕಳು ಮೃತಪಟ್ಟು ಇತರ 48 ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವ ದುರಂತ ಬಿಹಾರದ ಸರನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಈ ಮಕ್ಕಳು ಮಶರಾಕ್ ವಲಯದ ದಹರ್ಮಸತಿ  ಗಂದಾವನ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿದವರು. ಅಸ್ವಸ್ಥ ಮಕ್ಕಳನ್ನು ಸಮೀಪದ ಛಾಪ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿಯೂಟ ಸೇವಿಸುತ್ತಲೇ ತೀವ್ರವಾಗಿ ಅಸ್ವಸ್ಥಗೊಂಡ ಈ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆ ವೇಳೆಗಾಗಲೇ 11 ಮಕ್ಕಳು ಮೃತಪಟ್ಟಿದ್ದರು.

ಅನ್ನ, ಬೇಳೆಕಾಳು ಹಾಗೂ ಸೋಯಾಬೀನ್ ಒಳಗೊಂಡ ಆಹಾರವನ್ನು ಈ ಮಕ್ಕಳಿಗೆ ನೀಡಲಾಗಿತ್ತು. ಘಟನೆಯ ಕುರಿತು ಮುಖ್ಯಮಂತ್ರಿ ನಿತೀಶ್‌ಕುಮಾರ್ ಉನ್ನತಮಟ್ಟದ ತನಿಖೆಗೆ ಆದೇಶ ನೀಡಿದ್ದು ಮೃತ ಮಕ್ಕಳ ಪ್ರತಿ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಕೇಂದ್ರದ ಅಧಿಕಾರಿ ಭೇಟಿ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಸಂಬಂಧ ಪರಿಸ್ಥಿತಿಯನ್ನು ಖುದ್ದಾಗಿ ತಿಳಿದು ವರದಿ ನೀಡಲು ಹಿರಿಯ ಅಧಿಕಾರಿಯೊಬ್ಬರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದೆ.

ಬಂದ್‌ಗೆ ಆರ್‌ಜೆಡಿ ಕರೆ: ಘಟನೆಯನ್ನು ಖಂಡಿಸಿರುವ ಬಿಹಾರದ ವಿರೋಧ ಪಕ್ಷ ಆರ್‌ಜೆಡಿ, ಬುಧವಾರ ಘಟನೆ ನಡೆದ ಸರನ್ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು ಬಿಸಿಯೂಟದ ಸಾಮಗ್ರಿ ಸರಬರಾಜು ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಕುರಿತು ತನಿಖೆಗೆ ಒತ್ತಾಯಿಸಿದೆ. ಘಟನೆ ನಡೆದ ಶಾಲೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಲೋಕಸಭಾ ಕ್ಷೇತ್ರ ಛಾಪ್ರಾ ವ್ಯಾಪ್ತಿಗೆ ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.