ADVERTISEMENT

ಬಿಹಾರ: ಬಿಜೆಪಿ ಬಂದ್‌ಗೆ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 10:35 IST
Last Updated 18 ಜೂನ್ 2013, 10:35 IST

ಪಟ್ನಾ (ಐಎಎನ್‌ಎಸ್): ಎನ್‌ಡಿಎ ಮೈತ್ರಿಕೂಟದೊಂದಿಗಿನ ಸಖ್ಯ ತೊರೆದ ಜೆಡಿಯು ಕ್ರಮ ಖಂಡಿಸಿ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಮಂಗಳವಾರದಿಂದ ಆರಂಭಿಸಿರುವ ಬಂದ್‌ನಿಂದಾಗಿ ಹಲವೆಡೆ ರೈಲು ಹಾಗೂ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸಣ್ಣ ಘರ್ಷಣೆಯೊಂದರಲ್ಲಿ ಆರು ಜನರು ಗಾಯಗೊಂಡಿದ್ದಾರೆ.

ಮಂಗಳವಾರವನ್ನು `ವಿಶ್ವಾಸಘಾತ ದಿನ'ವನ್ನಾಗಿ ಆಚರಿಸಲು ಬಿಜೆಪಿ ಕರೆ ನೀಡಿದ್ದು, ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಬಲವಂತದಿಂದ ಹಲವಾರು ನಿಲ್ದಾಣಗಳಲ್ಲಿ ರೈಲುಗಳನ್ನು ತಡೆಹಿಡಿದರು. ಜೊತೆಗೇ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ಕೂಡ ಬಂದ್ ಮಾಡಿದರು.

ಬಂದ್ ವೇಳೆ ಪಟ್ನಾದಲ್ಲಿ ಬಿಜೆಪಿ ಹಾಗೂ ಜೆಡಿಯು ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ನಡೆಸಿದ ಈ ಹಲ್ಲೆಯಲ್ಲಿ ಜೆಡಿಯು ವಕ್ತಾರ ರಾಜೀವ್ ರಂಜನ್ ಹಾಗೂ ಮೂವರು ಪಕ್ಷದ ನಾಯಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘರ್ಷಣೆಯ ನಂತರ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಘೋಷಣೆ ಕೂಗಿದರೆ, ಜೆಡಿಯು ಕಾರ್ಯಕರ್ತರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿದರು ಎಂದು ಪೊಲೀಸರು ತಿಳಿಸಿದರು.

ಪ್ರತಿಭಟನಾಕಾರರು ರಾಜ್ಯದಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಪ್ರಮುಖ ಸಂಚಾರ ಮಾರ್ಗಗಳನ್ನು ತಡೆದು ಪ್ರತಿಭಟಿಸಿದರಲ್ಲದೇ, ಹಲವಾರು ನಿಲ್ದಾಣಗಳಲ್ಲಿ ರೈಲುಗಳನ್ನು ತಡೆಹಿಡಿದ ದೃಶ್ಯ ಕಂಡು ಬಂತು. ಹಲವು ಪ್ರದೇಶಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.