ನವದೆಹಲಿ (ಪಿಟಿಐ): ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮವೂ ಸೇರಿದಂತೆ ನಾಲ್ಕು ಸ್ವಯಂ ಸೇವಾ ಸಂಸ್ಥೆಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸೋಮವಾರ ದುರ್ಗಾಬಾಯಿ ದೇಶ್‌ಮುಖ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಅನಾಥ ಮಕ್ಕಳು ಮತ್ತು ಸಂಕಷ್ಟದಲ್ಲಿರುವ ಮಹಿಳೆಯರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿ ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮಕ್ಕೆ 2006ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ.
2005ನೇ ಸಾಲಿನ ಪ್ರಶಸ್ತಿಯನ್ನು ಮಿಜೋರಾಂನ ವಿಧವೆಯರ ಸಂಘ ಮತ್ತು ಭುವನೇಶ್ವರದ ಪೀಪಲ್ಸ್ ಫೋರಂ ಹಂಚಿಕೊಂಡಿವೆ. ಈ ಸ್ವಯಂ ಸೇವಾ ಸಂಸ್ಥೆಗಳು ಸಂಕಷ್ಟದಲ್ಲಿರುವ ಮಹಿಳೆಯರು, ಮಕ್ಕಳು ಮತ್ತು ವೇಶ್ಯೆಯರಿಗೆ ಆಶ್ರಯ ನೀಡಿ ಅಗತ್ಯ ಶಿಕ್ಷಣ ಹಾಗೂ ಆರ್ಥಿಕಾಭಿವೃದ್ಧಿಗೆ ನೆರವಾಗಿವೆ. ಇದಲ್ಲದೇ ಮಾನಸಿಕ ಅಸ್ವಸ್ಥರಿಗೆ ಆಶ್ರಯ ನೀಡುವ ಮೂಲಕ ಮಾನವೀಯ ಸೇವೆ ಸಲ್ಲಿಸುತ್ತಿರುವುದಕ್ಕೆ ಶ್ಲಾಘನೆ ಗಳಿಸಿವೆ.
ವೇಶ್ಯೆಯರನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸಿದ ಸೇವೆಗಾಗಿ ಮಹಾರಾಷ್ಟ್ರದ ಅಹಮದ್‌ನಗರದ ಸ್ನೇಹಾಲಯ ಸಂಸ್ಥೆಗೆ 2007ರ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿಯು ಐದು ಲಕ್ಷ ರೂಪಾಯಿಗಳ ನಗದು, ಫಲಕ ಒಳಗೊಂಡಿದೆ. ಕೇಂದ್ರ ಸಾಮಾಜಿಕ ಕಲ್ಯಾಣ ಮಂಡಲಿಯ ಸ್ಥಾಪಕ ಅಧ್ಯಕ್ಷೆ ದುರ್ಗಾಬಾಯಿ ದೇಶ್‌ಮುಖ್ ಅವರ ಸ್ಮರಣಾರ್ಥ ಮಂಡಲಿಯು ಈ ಪ್ರಶಸ್ತಿಯನ್ನು 1997ರಿಂದ ನೀಡಲು ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.