ನವದೆಹಲಿ (ಪಿಟಿಐ): ಬೆಲೆ ಏರಿಕೆ ನಿಯಂತ್ರಣಕ್ಕೆ ತರಲು ವಿಫಲವಾಗಿದೆ ಎಂದು ಎಡಪಕ್ಷಗಳು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ತಿರುಗಿಬಿದ್ದವು. ಈ ವಿಚಾರವಾಗಿ ಸರ್ವಪಕ್ಷಗಳ ಸಭೆ ಮತ್ತು ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದೂ ಒತ್ತಾಯಿಸಿದವು.
ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿಪಿಎಂ ಮುಖಂಡ ಬಸುದೇವ್ ಆಚಾರ‌್ಯ, ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮತ್ತು ಹಣಕಾಸು ಸಚಿವರು ಹಲವು ಸಾರಿ ಭರವಸೆ ನೀಡಿದ್ದರೂ ಸರ್ಕಾರ ಬೆಲೆ ಏರಿಕೆಯನ್ನು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಇದಕ್ಕೆ ಸಿಪಿಐನ ಗುರುದಾಸ್ ದಾಸ್ ಗುಪ್ತಾ ದನಿಗೂಡಿಸಿದರು.
ಬೆದರಿಕೆ ಭೀತಿಯಲ್ಲಿ ಅಣೆಕಟ್ಟು: ರಾಷ್ಟ್ರದ ಹಲವಾರು ಬೃಹತ್ ಅಣೆಕಟ್ಟುಗಳಿಗೆ ಭಯೋತ್ಪಾದಕರಿಂದ ಬೆದರಿಕೆ ಇದ್ದು ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಭಯೋತ್ಪಾದಕರು ತಮ್ಮ ಮುಂದಿನ ದುಷ್ಕೃತ್ಯಕ್ಕೆ ಪ್ರಮುಖ ಅಣೆಕಟ್ಟುಗಳನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.