ADVERTISEMENT

ಬೇಡಿ ವಿರುದ್ಧ ವಂಚನೆ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2011, 9:00 IST
Last Updated 27 ನವೆಂಬರ್ 2011, 9:00 IST
ಬೇಡಿ ವಿರುದ್ಧ ವಂಚನೆ ದೂರು ದಾಖಲು
ಬೇಡಿ ವಿರುದ್ಧ ವಂಚನೆ ದೂರು ದಾಖಲು   

ನವದೆಹಲಿ,(ಐಎಎನ್ಎಸ್): ಅಣ್ಣಾ ಹಜಾರೆ ತಂಡದ ಸದಸ್ಯೆ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರು, ವಿದೇಶದ ದತ್ತಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸೇರಿಕೊಂಡು ಹಣದ ಅವ್ಯವಹಾರ ನಡೆಸಿದ್ದಾರೆ, ಮೋಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ದೆಹಲಿ ಪೊಲೀಸರು ಭಾನುವಾರ ಪ್ರಕರಣವೊಂದನ್ನು ದಾಖಲಿಸಿದ್ದಾರೆ.  

ಸಮಯವೇ ಎಲ್ಲವನ್ನೂ ತಿಳಿಸುವುದು, ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸೂಕ್ತ ದಾಖಲೆಗಳು ತಮ್ಮಲ್ಲಿವೆ, ಜೊತೆಗೆ ತಾಳ್ಮೆಯೂ ಇದೆ ಎಂದು ಕಿರಣ್ ಬೇಡಿ ಅವರು ಈ ಸಂಬಂಧ  ಪ್ರತಿಕ್ರಿಯೆ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಪ್ರಕಾರ ವಿಶ್ವಾಸ ದ್ರೋಹ, ವಂಚನೆ ಮತ್ತು ಸಂಚು ನಡೆಸಿದ ಆರೋಪಗಳ ಮೇಲೆ ಕಿರಣ್ ಬೇಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಪರಾಧ ವಿಭಾಗದ ಪೊಲೀಸ ಉಪ ಆಯುಕ್ತ  ಅಶೋಕ ಚಾಂದ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ದೇವಿಂದರ ಚೌಹಾಣ್ ಎಂಬುವವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ದೆಹಲಿಯ ಕೋರ್ಟ್ ಶನಿವಾರ ಕಿರಣ್ ಬೇಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. 

ಇಂಡಿಯಾ ವಿಷನ್ ಫೌಂಡೇಷನ್ ಹೆಸರಿನ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿರುವ ಕಿರಣ್ ಬೇಡಿ ಅವರು, ಉಚಿತ ಕಂಪ್ಯೂಟರ್ ತರಬೇತಿ ಒದಗಿಸುವುದಾಗಿ ಹೇಳಿಕೊಂಡು ಅರೆಸೇನಾ ಪಡೆ ಮತ್ತು ರಾಜ್ಯ ಪೊಲೀಸ್ ಸಂಘ ಸಂಸ್ಥೆಗಳಿಗೆ ಮೋಸವೆಸಗಿದ್ದಾರೆ ಎಂದು ಚೌಹಾಣ್  ಅವರು ಆರೋಪಿಸಿದ್ದರು.

ಇದಕ್ಕೂ ಮೊದಲು, ತಮ್ಮನ್ನು ಭಾಷಣಕ್ಕೆ ಕರೆದ ಸರ್ಕಾರೇತರ ಸೇವಾ ಸಂಸ್ಥೆಗಳಿಂದ ಐಷಾರಾಮಿ ಪ್ರಯಾಣದ ವೆಚ್ಚ ಭರಿಸಿಕೊಂಡರೂ, ಕಡಿಮೆ ದರ್ಜೆಯ ಸೌಲತ್ತಿನ ಪ್ರಯಾಣ ಕೈಗೊಳ್ಳತ್ತಿದ್ದರೆಂಬ ಆರೋಪ,  ಅಣ್ಣಾ ತಂಡದ ಸದಸ್ಯರಾಗಿರುವ ಕಿರಣ್ ಬೇಡಿ ಅವರ ಮೇಲೆ ಆರೋಪ ಹೊರಿಸಲಾಗಿತ್ತು.

ತಮ್ಮ ಭಾಷಣಕ್ಕಾಗಿ ವಿವಿಧ ಸರ್ಕಾರೇತರ ಸೇವಾ ಸಂಸ್ಥೆಗಳು ಕರೆದಲ್ಲಿಗೆ ಹೋಗಿ ಬರಲು ಐಷಾರಾಮಿ ವಿಮಾನ ಯಾನದ ಟಿಕೆಟ್ ಹಣವನ್ನು ಪಡೆದರೂ, ತಾವು ಕೆಳ ದರ್ಜೆಯ ವಿಮಾನ ಪ್ರಯಾಣದ ಟಿಕೆಟ್ ನಲ್ಲಿ ಪ್ರಯಾಣಿಸುತ್ತಿದ್ದುದು ನಿಜ, ಆದರೆ ಆ ಉಳಿಕೆ ಹಣ ತಮ್ಮ ಸರ್ಕಾರೇತರ ಸೇವಾ ಸಂಸ್ಥೆಗೆ ಸೇರುತ್ತಿತ್ತು ಎಂದು ಕಿರಣ್ ಬೇಡಿ ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.