ADVERTISEMENT

ಬೇಲೆಕೇರಿ: ಸಿಬಿಐ ತನಿಖೆಗೆ?

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಿಂದ ಅದಿರಿನ ಅಕ್ರಮ ರಫ್ತು ತಡೆಯಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಸಾಧ್ಯತೆ ಕುರಿತು ಸುಳಿವು ನೀಡಿತು.

`ಅದಿರು ಅಕ್ರಮ ರಫ್ತು ಹಗರಣ~ದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಒಲವು ತೋರಿತು. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಆರು ತಿಂಗಳಲ್ಲಿ ಶಿಕ್ಷೆಗೊಳಪಡಿಸಲು ಸಾಧ್ಯವಾಗುವಂತೆ ಅಕ್ರಮ ಗಣಿಗಾರಿಕೆ ಹಗರಣದಿಂದ ಇದನ್ನು ಹೇಗೆ ಪ್ರತ್ಯೇಕಿಸಿ ತನಿಖೆ ನಡೆಸಬಹುದೆಂಬ ಬಗ್ಗೆ ಸಲಹೆ ನೀಡುವಂತೆ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಗೆ ನ್ಯಾ. ಆಫ್ತಾಬ್ ಆಲಂ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠ ಕೇಳಿತು.

2009-10ರ ನಡುವೆ ನಡೆದಿರುವ ಭಾರಿ ಪ್ರಮಾಣದ ಅದಿರು ಅಕ್ರಮ ರಫ್ತು ಹಗರಣ ಕುರಿತಂತೆ ಸಿಇಸಿ ಏಪ್ರಿಲ್ 27ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಸಿಇಸಿ ಪರ  ವಕೀಲ ಶ್ಯಾಂ ದಿವಾನ್ ಓದಿದರು.

`ಆರೋಪಿಗಳು ಮತ್ತು ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯಿಂದ ಕಾನೂನು ವ್ಯವಸ್ಥೆ ಕುಸಿದು `ಭೋಪಾಲ್ ರೀತಿ~ ಪರಿಸ್ಥಿತಿ ನಿರ್ಮಾಣವಾಗಿದೆ. ಇದೊಂದು ಅಪರೂಪದ ಹಗರಣ. ಆರೋಪಿಗಳು ಸರ್ಕಾರಕ್ಕೆ ರಾಜಧನವನ್ನೂ ಕಟ್ಟಿಲ್ಲ~ ಎಂದು ದಿವಾನ್ ಆರೋಪಿಸಿದರು.

`ಅದಿರು ಅಕ್ರಮ ರಫ್ತು ಹಗರಣ~ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿದ್ದೀರಿ. ಈಗಾಗಲೇ ಸಿಬಿಐ ಹಲವು ಪ್ರಕರಣಗಳ ತನಿಖೆ ನಡೆಸುತ್ತಿದೆ. ಅಲ್ಲದೆ, ಅದಿರು ರಫ್ತಿಗೆ  ಸಂಬಂಧಿಸಿದಂತೆ ಟನ್‌ಗಟ್ಟಲೆ ದಾಖಲೆಗಳಿವೆ.

ಹೀಗಾದರೆ ವರ್ಷಗಟ್ಟಲೆ ತನಿಖೆ ನಡೆಸಬೇಕಾಗುತ್ತದೆ. ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಬೇಗ ಶಿಕ್ಷೆಯಾಗಬೇಕಾದರೆ ಪ್ರಕರಣವನ್ನು ಪ್ರತ್ಯೇಕಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೇಗೆ ಪ್ರಕರಣವನ್ನು ಪ್ರತ್ಯೇಕಿಸಬಹುದು ಎಂದು ಸಲಹೆ ಮಾಡಿ~ ಎಂದು ನ್ಯಾ. ಆಫ್ತಾಬ್ ಆಲಂ ಕೇಳಿದರು.

`ಅಕ್ರಮ ಅದಿರು ರಪ್ತು ಪ್ರಕರಣದಲ್ಲಿ ಈಗಾಗಲೇ ರಾಜ್ಯ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿಗಳ ಮೇಲೆ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ ಪ್ರಯೋಗಿಸಲಾಗಿದೆ~ ಎಂದು ಸರ್ಕಾರದ ವಕೀಲ ರಾಜು ರಾಮಚಂದ್ರನ್ ಹೇಳಿದರು. ಆದರೆ, ರಾಜ್ಯ ಸರ್ಕಾರದ ವಾದಕ್ಕೆ ಸುಪ್ರೀಂ ಕೋರ್ಟ್ ಕಿವಿಗೊಡಲಿಲ್ಲ.

`ಇವೆಲ್ಲವೂ ರಾಜ್ಯ ಸರ್ಕಾರದ ಸಹಕಾರವಿಲ್ಲದೆ ನಡೆಯುವುದೇ. ಅಲ್ಲಿ ನೆಲದ ಕಾನೂನು ಯದ್ವಾತದ್ವಾ ಉಲ್ಲಂಘನೆ ಆಗಿಲ್ಲವೆ. ಜಪ್ತಿ ಮಾಡಿದ ಅದಿರು ರಾಜಾರೋಷವಾಗಿ ನಾಪತ್ತೆ ಆಗುವುದೆಂದರೆ ಏನರ್ಥ. ಪ್ರಕರಣದ ಗಂಭೀರತೆ ಅರ್ಥಮಾಡಿಕೊಳ್ಳಲು ಇದೊಂದು ನಿದರ್ಶನ ಸಾಕಲ್ಲವೆ~ ಎಂದು ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ಸ್ವತಂತ್ರ ಕುಮಾರ್ ಅವರನ್ನು ಒಳಗೊಂಡಿದ್ದ ನ್ಯಾಯಪೀಠ ಪ್ರಶ್ನಿಸಿತು.

`ಅಕ್ರಮ ಅದಿರು ರಫ್ತು ಹಗರಣದ ತನಿಖೆಯನ್ನು ತ್ವರಿತವಾಗಿ ಮುಗಿಸುವ ಉದ್ದೇಶದಿಂದ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಉಳಿದ ಪ್ರಕರಣಗಳಿಂದ ಪ್ರತ್ಯೇಕಿಸಬಹುದೇ~ ಎಂಬ ಬಗ್ಗೆ ಮತ್ತೊಂದು ಹೆಚ್ಚುವರಿ ವರದಿ ಸಲ್ಲಿಸುವಂತೆ ನ್ಯಾಯಪೀಠ `ಸಿಇಸಿ~ಗೆ ಕೇಳಿತು. ಅನಂತರ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು. ಅಂದು ವಿಚಾರಣೆ ಸಮಯದಲ್ಲಿ ಹಾಜರಿರುವಂತೆ ಸಿಬಿಐ ಅಧಿಕಾರಿಗಳಿಗೂ ಕೋರ್ಟ್ ನಿರ್ದೇಶಿಸಿತು.

ಇದಲ್ಲದೆ, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಾರಿಕೆ ಪ್ರದೇಶಗಳಲ್ಲಿನ ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ ಸಿದ್ಧತೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕರಣವನ್ನು ಇದೇ ತಿಂಗಳ 31ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಅರಣ್ಯ ಪೀಠ ತಿಳಿಸಿತು.

ಅಕ್ರಮ ಅದಿರು ರಫ್ತು ಪ್ರಕರಣದಲ್ಲಿ `ಅದಾನಿ ಎಂಟರ್‌ಪ್ರೈಸಸ್~, `ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ ಲಿ. ಸಲಗಾಂವಕರ್ ಮೈನಿಂಗ್ ಇಂಡಸ್ಟ್ರಿಸ್ ಪ್ರೈ ಲಿ~. ಹಾಗೂ `ರಾಜಮಹಲ್ ಸಿಲ್ಕ್ಸ್~ ಮುಂತಾದ ಕಂಪೆನಿಗಳು ಭಾಗಿಯಾಗಿವೆ ಎಂದು `ಸಿಇಸಿ~ ಹೇಳಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ 8 ಲಕ್ಷ ಟನ್ ಸೇರಿದಂತೆ ಒಟ್ಟು 43ಲಕ್ಷ ಟನ್ ಅಕ್ರಮ ಅದಿರು  ರಫ್ತು ಮಾಡಿದ ಪ್ರಕರಣ ಇದಾಗಿದೆ.

ರಾಜ್ಯದ ಹಿರಿಯ ಪೊಲೀಸ್ (ಸಿಒಡಿ), ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.