ADVERTISEMENT

‘ಬ್ಲೂ ವೇಲ್‌’ನಿಂದ ಮಕ್ಕಳ ರಕ್ಷಣೆಗೆ ಸಲಹೆ

12ರಿಂದ 19ರ ವರ್ಷದೊಳಗಿನ ಹೆಚ್ಚಿನ ಮಕ್ಕಳು ಆಟಕ್ಕೆ ಬಲಿ

ಪಿಟಿಐ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಬ್ಲೂ ವೇಲ್‌
ಬ್ಲೂ ವೇಲ್‌   

ನವದೆಹಲಿ: ಅಮಾಯಕ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸುವ ಆನ್‌ಲೈನ್‌ನ ಅಪಾಯಕಾರಿ ಆಟ ‘ಬ್ಲೂ ವೇಲ್‌’ಗೆ 12ರಿಂದ 19ರ ವರ್ಷದೊಳಗಿನ ಮಕ್ಕಳು ಮತ್ತು ಯುವಕರು ಬಲಿಯಾಗುವ ಸಾಧ್ಯತೆ ಹೆಚ್ಚು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಎಚ್ಚರಿಕೆ ನೀಡಿದೆ.

ಬ್ಲೂ ವೇಲ್‌ ಈಗ ಎ ಸೈಲೆಂಟ್‌ ಹೌಸ್‌, ಎ ಸೀ ಆಫ್‌ ವೇಲ್ಸ್‌, ವೇಕ್‌ ಮಿ ಅಪ್‌ ಎಟ್‌ 4.20 ಎ.ಎಂ. ಮುಂತಾದ ಹೊಸ ಹೆಸರುಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಅಪಾಯಕಾರಿ ಆಟದಿಂದ ಮಕ್ಕಳನ್ನು ದೂರವಿಡುವಂತೆ ಪೋಷಕರು ಮತ್ತು ಶಿಕ್ಷಕರಿಗೆ ಆಯೋಗ ಎಚ್ಚರಿಕೆ ನೀಡಿದೆ.

ಈ ಮಾರಣಾಂತಿಕ ಆಟದಿಂದ ಮಕ್ಕಳನ್ನು ತಡೆಯುವ ವಿಧಾನಗಳ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕಿರುವ ಆಯೋಗ ಅದನ್ನು ಶಿಕ್ಷಕರು ಮತ್ತು ಪೋಷಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಿದೆ.

ADVERTISEMENT

ಬ್ಲೂ ವೇಲ್‌ ಹಾಗೂ ಇನ್ನಿತರ ಇಂತಹ ಆನ್‌ಲೈನ್‌ ಆಟಗಳನ್ನು ಮಕ್ಕಳು ಆ್ಯಪ್‌ ಸ್ಟೋರ್ ಇಲ್ಲವೇ ಸಾಮಾಜಿಕ ಜಾಲತಾಣಗಳಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಿಲ್ಲ.

ಈ ಆಟಗಳಲ್ಲಿ ಸಕ್ರಿಯವಾಗಿರುವ ಗುಂಪುಗಳು ಮಕ್ಕಳಿಗೆ ಈ ಆಟವಾಡಲು ಪ್ರಚೋದಿಸುವ ಸಾಧ್ಯತೆ ಇದೆ ಎಂದು ಎನ್‌ಸಿಪಿಸಿಆರ್‌ ಮಾಹಿತಿ ನೀಡಿದೆ. ಒಂದು ವೇಳೆ ಮಕ್ಕಳು ಇಂತಹ ಆಟಗಳಲ್ಲಿ ತೊಡಗಿದ್ದರೆ ಪೋಷಕರು ತಕ್ಷಣ ಶಿಕ್ಷಕರು, ಪೊಲೀಸರು, ಮಕ್ಕಳ ಮನೋವೈದ್ಯರು, ಸಮಾಲೋಚಕರ ನೆರವು ಪಡೆಯುವಂತೆ ಕಿವಿಮಾತು ಹೇಳಿದೆ.

**

ಪೋಷಕರು ಏನು ಮಾಡಬೇಕು?

* ಶಂಕಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ಪೋಷಕರು ಮತ್ತು ಶಿಕ್ಷಕರು ಪರಸ್ಪರ ಮಾಹಿತಿ ವಿನಿಮಯ

* ಪೋಷಕರು ತಕ್ಷಣ ಎಚ್ಚೆತ್ತುಕೊಂಡು ಶಿಕ್ಷಕರೊಂದಿಗೆ ಚರ್ಚಿಸಿ, ಮಕ್ಕಳ ಮನೋ ವೈದ್ಯರನ್ನು ಸಂಪರ್ಕಿಸಬೇಕು

* ಪೋಷಕರು ಮಕ್ಕಳೊಂದಿಗೆ ಹೆಚ್ಚು ಬೆರೆಯಬೇಕು

* ಮಕ್ಕಳಿಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ಚರ್ಚೆ

* ಮಕ್ಕಳ ಬೇಕು, ಬೇಡಿಕೆಗಳ ಬಗ್ಗೆ ಗಮನ

**

ಎಚ್ಚರಿಕೆ ವಹಿಸಬೇಕಾದ ಅಂಶಗಳು

* ಮಕ್ಕಳ ವರ್ತನೆಯಲ್ಲಿ ಹಠಾತ್‌ ಬದಲಾವಣೆಗಳ ಮೇಲೆ ಸೂಕ್ಷ್ಮ ನಿಗಾ

* ಮಕ್ಕಳು ಸದಾ ತಮ್ಮದೇ ಭ್ರಮಾ ಲೋಕದಲ್ಲಿರುವುದು, ಯಾರೊಂದಿಗೂ ಹೆಚ್ಚು ಮಾತನಾಡದಿರುವುದು

* ಓದು, ಕಲಿಕೆಯಲ್ಲಿ ನಿರಾಸಕ್ತಿ ಮತ್ತು ಪರೀಕ್ಷೆಯಲ್ಲಿ ಕಡಿಮೆ ಅಂಕ

* ಸದಾ ಮೊಬೈಲ್‌ ಅಥವಾ ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್‌ನಲ್ಲಿ ನಿರತರಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.