ADVERTISEMENT

ಭಯೋತ್ಪಾದನೆಗೆ ಆರ್ಥಿಕ ನಿಧಿ: ಕಾಶ್ಮೀರ, ದೆಹಲಿಯಲ್ಲಿ ಎನ್‌ಐಎ ದಾಳಿ

ಪಿಟಿಐ
Published 3 ಜೂನ್ 2017, 5:47 IST
Last Updated 3 ಜೂನ್ 2017, 5:47 IST
ಭಯೋತ್ಪಾದನೆಗೆ ಆರ್ಥಿಕ ನಿಧಿ: ಕಾಶ್ಮೀರ, ದೆಹಲಿಯಲ್ಲಿ ಎನ್‌ಐಎ ದಾಳಿ
ಭಯೋತ್ಪಾದನೆಗೆ ಆರ್ಥಿಕ ನಿಧಿ: ಕಾಶ್ಮೀರ, ದೆಹಲಿಯಲ್ಲಿ ಎನ್‌ಐಎ ದಾಳಿ   

ಶ್ರೀನಗರ, ನವದೆಹಲಿ: ಭಯೋತ್ಪಾದನೆ ಹಾಗೂ ವಿನಾಶಕಾರಿ ಕೃತ್ಯಗಳಿಗೆ ಪಾಕಿಸ್ತಾನದಿಂದ ಆರ್ಥಿಕ ನಿಧಿ ಪಡೆಯುತ್ತಿರುವ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ ಕಾಶ್ಮೀರದ 14 ಕಡೆ ಮತ್ತು ದೆಹಲಿಯ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿ, ತನಿಖೆ ಆರಂಭಿಸಿದೆ.

ಈ ಮೊದಲು ಪೂರ್ವಭಾವಿ ತನಿಖೆಯನ್ನು ದಾಖಲಿಸಿದ್ದ ಎನ್‌ಐಎ, ಶುಕ್ರವಾರ ಸಂಜೆ ಅದನ್ನು ಆರ್‌ಸಿ ಆಗಿ ಮಾರ್ಪಡಿಸಿ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮುಖಂಡರ ಮನೆಗಳಲ್ಲಿ ಹಲವು ಗಂಟೆಗಳ ಶೋಧ ಆರಂಭಿಸಿದೆ.

ಜತೆಗೆ, ರಾಷ್ಟ್ರ ರಾಜಧಾನಿಯಲ್ಲಿ ಎಂಟು ಹವಾಲ ವಿತರಕರು ಮತ್ತು ವ್ಯಾಪಾರಿಗಳ ಮನೆ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ಪ್ರತ್ಯೇಕತಾವಾದಿ ಸಯದ್‌ ಅಲಿ ಶಾ ಗಿಲಾನಿ ಮತ್ತು ಹುರಿಯತ್‌ ಕಾನ್ಫರೆನ್ಸ್‌ನ ಇತರ ಸಹಾಯಕರು ಮತ್ತು ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಎನ್‌ಐಎ ತಂಡ ಸೋನಿಪತ್‌ನ ಎರಡು ಕಡೆ ತನಿಖೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದು ಕೆಲ ದಿನಗಳ ಹಿಂದಷ್ಟೇ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಹುರಿಯತ್ ನಾಯಕರೊಬ್ಬರು, ‘ಕಾಶ್ಮೀರದಲ್ಲಿ ಹಿಂಸಾಚಾರ ಉಂಟುಮಾಡಲು ಹವಾಲಾ ದಂಧೆಯ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ನಮಗೆ ಆರ್ಥಿಕ ನೆರವು ನೀಡುತ್ತಿದೆ’ ಎಂದು ಹೇಳಿಕೊಂಡಿದ್ದ. ಈ ಸಂಬಂಧ ಎನ್‌ಐಎ ಅಧಿಕಾರಿಗಳು ಪ್ರತ್ಯೇಕತಾವಾದಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.