ADVERTISEMENT

ಭಾಗವತ್ ಮೀಸಲಾತಿ ಹೇಳಿಕೆ ಬಿಜೆಪಿಗೆ ಮುಳುವು: ಲಾಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2015, 19:47 IST
Last Updated 18 ಅಕ್ಟೋಬರ್ 2015, 19:47 IST

ಪಟ್ನಾ (ಪಿಟಿಐ): ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್ಎಸ್ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೀಸಲಾತಿ ಹೇಳಿಕೆ ಬಿಜೆಪಿಗೆ ಮುಳುವಾಯಿತು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಸಮೀಕ್ಷಾ ಸಭೆಯಲ್ಲಿ ತಮ್ಮ ಸಹಚರರ ಜೊತೆ ಚರ್ಚೆ ನಡೆಸಿದ ಲಾಲು, ಆರ್ಎಸ್ಎಸ್‌ನ ಎರಡನೇ ಸರಸಂಚಾಲಕ ಎಂ.ಎಸ್‌. ಗೋಲ್ವಾಲ್ಕರ್   ಅವರ ‘ಬಂಚ್‌ ಆಫ್ ಥಾಟ್ಸ್‌’ ಪುಸ್ತಕ ತೋರಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಾನು ನಿಜವಾದ ಗೋಪಾಲಕ. ನನ್ನ ಹೆಂಡತಿ ರಾಬ್ಡಿ ದೇವಿ ಇಂದಿಗೂ ನಮ್ಮ ಮನೆಗೆ ಹೊಸ ಹಸು ಬಂದಾಗ ಅದರ ಕಾಲುಗಳನ್ನು ತೊಳೆಯುತ್ತಾಳೆ’ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

‘ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕು ಎಂದು ಗೋಲ್ವಾಲ್ಕರ್ ಹೇಳಿದ್ದಾರೆ. ಹಾಗಾಗಿ, ಬಿಜೆಪಿ ತಮ್ಮ ಗುರು (ಗೋಲ್ವಾಲ್ಕರ್) ಹೇಳಿದ್ದನ್ನು ಪಾಲಿಸುತ್ತಿದೆ. ದಶಕಗಳ ಹೋರಾಟದ ನಂತರ ದಲಿತರು ಮತ್ತು ಹಿಂದುಳಿದವರು ಮೀಸಲಾತಿಯನ್ನು ಪಡೆದಿದ್ದಾರೆ. ಆದರೆ, ಅದನ್ನು ಕಸಿಯಲು ಬಿಜೆಪಿ ಪ್ರಯತ್ನಿಸುತ್ತಿದೆ’ಎಂದು ಲಾಲು ತಿಳಿಸಿದ್ದಾರೆ.

ಜಾತಿ ವ್ಯವಸ್ಥೆ ಕುರಿತು ಮೋದಿ ಅವರಿಗಿರುವ ನೋಟಗಳ ಕುರಿತಾಗಿಯೂ ಲಾಲು ಟೀಕೆ ವ್ಯಕ್ತಪಡಿಸಿದರು. ‘ಮೋದಿ ಬರೆದಿರುವ ‘ಕರ್ಮಯುಗ’ ಪುಸ್ತಕದಲ್ಲಿ ದಲಿತರು ತಮ್ಮ ಅಧ್ಯಾತ್ಮ ಸಂತೋಷಕ್ಕಾಗಿ ಮಲ ಹೊರುತ್ತಾರೆ ಎಂದು ಬರೆದಿದ್ದಾರೆ. ಹಾಗಾದರೆ, ಭಾಗವತ್ ಸೇರಿದಂತೆ ಆರ್ಎಸ್‌ಎಸ್‌ ನವರು ಆಧ್ಯಾತ್ಮಿಕ ಸಂತೋಷಕ್ಕಾಗಿ ಏಕೆ ಇಂಥ ಅನುಭವ ಪಡೆಯಬಾರದು’ ಎಂದು ಲಾಲು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.