ADVERTISEMENT

ಭಾರತ–ಚೀನಾ ಸಂಘರ್ಷದ ನಡುವೆ ಹಾರಿದ ಟಿಬೆಟ್‌ ರಾಷ್ಟ್ರಧ್ವಜ

ಏಜೆನ್ಸೀಸ್
Published 8 ಜುಲೈ 2017, 14:00 IST
Last Updated 8 ಜುಲೈ 2017, 14:00 IST
ಭಾರತ–ಚೀನಾ ಸಂಘರ್ಷದ ನಡುವೆ ಹಾರಿದ ಟಿಬೆಟ್‌ ರಾಷ್ಟ್ರಧ್ವಜ
ಭಾರತ–ಚೀನಾ ಸಂಘರ್ಷದ ನಡುವೆ ಹಾರಿದ ಟಿಬೆಟ್‌ ರಾಷ್ಟ್ರಧ್ವಜ   

ನವದೆಹಲಿ: ಸಿಕ್ಕಿಂ ಮತ್ತು ಭೂತಾನ್ ಗಡಿ ವಿಚಾರದಲ್ಲಿ ಭಾರತ–ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರೆ, ಮತ್ತೊಂದೆಡೆ ಚೀನಾ ಜತೆಗೆ ಗಡಿ ವಿವಾದ ಇರುವ ಪಾಂಗ್‌ ಗಾಂಗ್‌ ಸರೋವರ ಪ್ರದೇಶದಲ್ಲಿ ಟಿಬೆಟ್ ರಾಷ್ಟ್ರಧ್ವಜ ಹಾರಾಡುತ್ತಿದೆ.

ಟಿಬೆಟ್‌ನ ದೇಶಾಂತರ ಸರ್ಕಾರದ ಅಧ್ಯಕ್ಷ ಲಾಬ್‌ಸಾಂಗ್‌ ಸಾಂಗೇ ಲಡಾಕ್‌ನ ಪಾಂಗ್‌ ಗಾಂಗ್ ತೀರದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಿಸಿರುವುದಾಗಿ ‘ದಿ ವೈರ್‌’ ವರದಿ ಮಾಡಿದೆ.

‘ಅತಿ ಪ್ರಮುಖ ವಲಯದಲ್ಲಿ ಇದೇ ಮೊದಲ ಬಾರಿಗೆ ಟಿಬೆಟ್‌ನ ಸ್ವತಂತ್ರ ರಾಷ್ಟ್ರಧ್ವಜವು ದೇಶಾಂತರ ಸರ್ಕಾರದ  ಅಧ್ಯಕ್ಷರಿಂದ ಅನಾವರಣಗೊಂಡಿದೆ’ ಎಂದು ಟಿಬೆಟ್‌ ಕೇಂದ್ರ ಆಡಳಿತ ವಕ್ತಾರ ಸೋನಮ್‌ ನೊರ್ಬು ಡಾಗ್ಪೋ ಪ್ರತಿಕ್ರಿಯಿಸಿದ್ದಾರೆ.

ADVERTISEMENT

14 ಸಾವಿರ ಅಡಿ ಎತ್ತರದಲ್ಲಿರುವ ಪಾಂಗ್‌ ಗಾಂಗ್‌ ಸರೋವರವು ಅರ್ಧ ಭಾರತ ಹಾಗೂ ಇನ್ನರ್ಧ ಟಿಬೆಟ್‌ ವಲಯದಲ್ಲಿ ಹರಡಿದೆ. ಈ ಭಾಗದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಿಸಿರುವುದು ‘ರಾಜಕೀಯ ಹಾಗೂ ವೈಯಕ್ತಿಕ ಪ್ರಾಮುಖ್ಯತೆ ಪಡೆದಿದೆ’ ಎಂದಿದ್ದಾರೆ.

ಟಿಬೆಟ್‌ ಧರ್ಮಗುರು ದಲೈಲಾಮಾ ಅವರ ಹುಟ್ಟುಹಬ್ಬದ ಆಚರಣೆಗಾಗಿ ಲಡಾಕ್‌ ಸಮುದಾಯದ ಆಹ್ವಾನದ ಮೇರೆಗೆ  ಲಾಬ್‌ಸಾಂಗ್‌ ಸಾಂಗೇ ಜು.6ರಂದು ಲಡಾಕ್‌ನಲ್ಲಿದ್ದರು.

‘ಅಳತೆಯ ಲೆಕ್ಕದಲ್ಲಿ ನಾನೀಗ ಟಿಬೆಟ್‌ನಿಂದ ಕೆಲವೇ ಮೀಟರ್‌ ಅಂತರದಲ್ಲಿ ನಿಂತಿರಬಹುದು. ಆದರೆ, ರಾಜಕೀಯ ಸ್ವತಂತ್ರ ಹಾಗೂ ಅಭಿಪ್ರಾಯಗಳ ಸಂಬಂಧ ಟಿಬೆಟ್‌ನೊಳಗಿಂದ ಬಹಳ ದೂರದಲ್ಲಿದ್ದೇನೆ’ ಎಂದು ಲಾಬ್‌ಸಾಂಗ್‌ ಸಾಂಗೇ ಹೇಳಿರುವುದಾಗಿ ವರದಿಯಾಗಿದೆ.

ಭಾರತ–ಚೀನಾ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಟಿಬೆಟ್‌ ರಾಷ್ಟ್ರಧ್ವಜ ಹಾರಾಟ ನಡೆಸಿರುವುದು ರಾಜಕೀಯ ಪ್ರೇರಿತ ಎನ್ನುವಂತೆ ಕಾಣುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಆರ್‌.ಎಸ್.ಕಲ್ಹಾ ಅಭಿಪ್ರಾಯ ಪಟ್ಟಿದ್ದಾರೆ.

ನೈಜ ನಿಯಂತ್ರಣ ರೇಖೆ(ಎಲ್‌ಎಸಿ) : ಭಾರತ ಮತ್ತು ಚೀನಾ ನಡುವೆ ಎಲ್‌ಎಸಿ ಬಗ್ಗೆ ವಿವಾದ ಇದೆ. ಸರೋವರದ ಪೂರ್ವದ ಕೊನೆಗೆ ಟಿಬೆಟ್‌ ಇದೆ. ಸರೋವರದ ಕೆಲವು ಭಾಗಗಳನ್ನು ಚೀನಾ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ ಎಂಬುದು ಭಾರತದ ವಾದ. 1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ಈ ಸರೋವರದ ದಡದಲ್ಲಿಯೂ ಕಾದಾಟ ನಡೆದಿತ್ತು.

ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಎಲ್‌ಎಸಿ ಸಮೀಪದ ತವಾಂಗ್‌ಗೆ ಭೇಟಿ ನೀಡಲು ದಲೈಲಾಮಾ ಅವರಿಗೆ ಭಾರತ ಸರ್ಕಾರ ಅವಕಾಶ ಮಾಡಿ ಕೊಟ್ಟಿತ್ತು. ಇದು ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.