ADVERTISEMENT

ಭಾರತ- ಇರಾನ್ ಸಂಬಂಧಕ್ಕೆ ಕುತ್ತು?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ನವದೆಹಲಿ: ಇಸ್ರೇಲ್ ರಾಯಭಾರ ಕಚೇರಿಗೆ ಸೇರಿದ ಕಾರು ಸ್ಫೋಟ ಪ್ರಕರಣದಲ್ಲಿ ಇರಾನ್ ಕೈವಾಡವಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ,  ಇಸ್ರೇಲ್-ಇರಾನ್ ನಡುವಿನ ಕಹಿ ಸಂಬಂಧದ ಎಳೆಯಲ್ಲಿ ಭಾರತವೂ ಸಿಕ್ಕಿಹಾಕಿಕೊಂಡಂತಾಗಿದೆ.

 ಇಷ್ಟೇ ಅಲ್ಲದೆ, ಇದು ಈಗಾಗಲೇ ಹದಗೆಟ್ಟಿರುವ ಭಾರತ- ಇರಾನ್ ನಡುವಿನ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಸಂಕೀರ್ಣವಾಗಿಸುವ ಸಾಧ್ಯತೆಯೂ ಇದೆ. ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಹಣ ಪಾವತಿಸುವ ಸಂಬಂಧ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಭಾರತ ಶ್ರಮಿಸುತ್ತಿರುವ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.

ಒಂದು ವೇಳೆ ಸ್ಫೋಟದ ಹಿಂದೆ ಇರಾನ್ ಕೈವಾಡ ಸ್ಪಷ್ಟವಾದಲ್ಲಿ ಭಾರತ ಮಧ್ಯಪೂರ್ವ ರಾಷ್ಟ್ರಗಳ ವೈರತ್ವದಲ್ಲಿ ಮಧ್ಯ ಪ್ರವೇಶಿಸಲು ಇಚ್ಛಿಸದಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಟ್ಟಿಗೆ ಹೇಳುವುದಾದಲ್ಲಿ ಇರಾನ್ ತೈಲ ಪೂರೈಕೆ ರಾಷ್ಟ್ರವಾಗಿದ್ದರೆ, ಇಸ್ರೇಲ್ ರಕ್ಷಣಾ ಸಾಮಗ್ರಿಗಳ ಬೇಡಿಕೆಯನ್ನು ಪೂರೈಸುವ ರಾಷ್ಟ್ರವಾಗಿದೆ.

ಪ್ರಸ್ತುತ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಅದೇ ವೇಳೆ ಇರಾನ್ ಭಾರತದಿಂದ ಅಕ್ಕಿ, ಗೋಧಿ, ಔಷಧಿ ಮತ್ತು ಚಹಾಪುಡಿ ಆಮದು ಮಾಡಿಕೊಳ್ಳುತ್ತದೆ. ಇವುಗಳಲ್ಲಿ ಇರಾನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ವಾರ್ಷಿಕ 20  ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ.

ದಾಳಿ ಹಿನ್ನೆಲೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯು ಅಕ್ಕಿ ರಫ್ತಿನ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಭಾರತೀಯ ರಫ್ತುದಾರರು ಕಳವಳ ವ್ಯಕ್ತಪಡಿಸಿದ್ದಾರೆ.

`ಇರಾನ್ ಮತ್ತು ಭಾರತದ ನಡುವಿನ ಸಂಬಂಧದಲ್ಲಿ ಏನೇ ಏರಿಳಿತ ಕಂಡುಬಂದರೂ ಅದು ಕಳವಳ ಮೂಡಿಸುತ್ತದೆ. ಒಟ್ಟಾರೆಯಾಗಿ ಅದು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ~ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ವಿಜಯ್ ಸೇಥಿಯಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಇರಾನ್‌ನೊಂದಿಗಿನ ವ್ಯಾಪಾರ ಸಂಬಂಧವನ್ನು ಇನ್ನಷ್ಟು ಬಲಪಡಿಸುವಲ್ಲಿ ಭಾರತ ಶ್ರಮಿಸುತ್ತಿದ್ದು, ಸ್ಫೋಟ ಪ್ರಕರಣವು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಹೇಳುವುದಕ್ಕೆ ಇದು ಸಕಾಲವಲ್ಲ ಎಂದು ಅಖಿಲ ಭಾರತ ರಫ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

`ಭಾರತದ ರಫ್ತು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಶೀಘ್ರದಲ್ಲೇ ಇರಾನ್‌ಗೆ ನಿಯೋಗವೊಂದನ್ನು ಕಳುಹಿಸಲು ಸರ್ಕಾರ ಯೋಜಿಸಿದೆ~ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಇತ್ತೀಚೆಗೆ ಹೇಳಿಕೆ ನೀಡಿರುವುದನ್ನೂ ಇಲ್ಲಿ ಸ್ಮರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.