ADVERTISEMENT

ಭಾರತ- ಚೀನಾ ಗಡಿ ವಿವಾದ: ಲೋಕಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ನವದೆಹಲಿ (ಪಿಟಿಐ): ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿ ಬುಧವಾರ ಲೋಕಸಭೆಯಲ್ಲಿ ಬಿಜೆಪಿ ಹಾಗೂ ಇತರ ವಿರೋಧ ಪಕ್ಷಗಳ ಸದಸ್ಯರು ಭಾರಿ ಕೋಲಾಹಲ ಎಬ್ಬಿಸಿದರು.

`ಈಗಿರುವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಗ್ಗೆ ಉಭಯ ದೇಶಗಳು ಭಿನ್ನಾಭಿಪ್ರಾಯ ಹೊಂದಿವೆ' ಎಂದು ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರು ಶೂನ್ಯವೇಳೆಯಲ್ಲಿ ಹೇಳಿಕೆ ನೀಡಿದಾಗ ಬಿಜೆಪಿ ಹಾಗೂ ಮತ್ತಿತರ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು.

`ಕಳೆದ ಮೂರು ವರ್ಷಗಳಿಂದ ದೇಶದ ಗಡಿಪ್ರದೇಶದಲ್ಲಿ ಚೀನಾ ಸೇನೆಯು ಅಕ್ರಮವಾಗಿ ನುಸುಳುತ್ತಿರುವ ಕುರಿತು ನಾನು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ವಿವರಣೆ ಕೊಟ್ಟಿಲ್ಲ' ಎಂದು ಬಿಜೆಪಿಯ ಲಾಲ್‌ಜಿ ಟಂಡನ್ ಅವರು ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರಿಗೆ ಹೇಳಿದರು.

`ಭಾರತ-ಚೀನಾ ಗಡಿಯಲ್ಲಿ ಈಗಿರುವ ನಿಯಂತ್ರಣ ರೇಖೆ ಕುರಿತು ನಮ್ಮ ನಡುವೆ ಸ್ಪಷ್ಟವಾದ ಒಪ್ಪಂದ ಆಗಿಲ್ಲ. ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ' ಎಂದು ಖುರ್ಷಿದ್ ಹೇಳಿದರು.

`ಸರ್ಕಾರವು ಚೀನಾಗೆ ಮಣಿಯುತ್ತಿದೆ. ಗಡಿಯಲ್ಲಿ ವೀಕ್ಷಣಾ ಗೋಪುರ ಅಳವಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ಬಿಜೆಪಿ ಸದಸ್ಯರು ದೂರಿದರು.
ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್, ಬಿಎಸ್‌ಪಿ ಮುಖಂಡ ದಾರಾ ಸಿಂಗ್ ಚೌಹಾಣ್, ಬಿಪಿಎಫ್ ನಾಯಕ ಎಸ್.ಕೆ. ವಿಶ್ವಮೂರ್ತಿ ಕೂಡ ಇದಕ್ಕೆ ದನಿ ಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.