ADVERTISEMENT

ಭಾರತ - ಚೀನಾ ಯುದ್ಧಕ್ಕೆ 50 ವರ್ಷ ಸುದ್ದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಅಕ್ಟೋಬರ್ 20, 1962, ಈ ದಿನ, ದೇಶದ ಇತಿಹಾಸದಲ್ಲಿ ಅಚ್ಚಳಿಯದ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಅಂದು ನೆರೆಯ ಚೀನಾ, ದೇಶದ ಮೇಲೆ ಅತಿಕ್ರಮಣ ಮಾಡಿತ್ತು.  ಆ ಯುದ್ಧಕ್ಕೆ ಈಗ 50 ವರ್ಷ ತುಂಬಿದೆ. 4 ವಾರಗಳ ಕಾಲ ಈ ಯುದ್ಧ ನಡೆದಿತ್ತು.

ಯುದ್ಧದ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಸಾಂಸ್ಥಿಕ ವ್ಯವಸ್ಥೆ ಅಸ್ತಿತ್ವದಲ್ಲಿ ಇದ್ದಿರಲಿಲ್ಲ. ರಣರಂಗದಲ್ಲಿ ಸಾವಿರಾರು  ಸೈನಿಕರು ವಿರೋಚಿತವಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದರು. ಅಸಮರ್ಥ ದಂಡ ನಾಯಕರು, ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾದ ರಾಜಕೀಯ ಮುಖಂಡರಿಂದ ಸೋಲು ಕಾಣಬೇಕಾಯಿತು. ಈ ಯುದ್ಧ ಅಕ್ಟೋಬರ್ 20ಕ್ಕೆ ಆರಂಭಗೊಂಡು ನವೆಂಬರ್ 21ಕ್ಕೆ ಕೊನೆಗೊಂಡಿತು. ಅಂದು ಚೀನಾ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು.

ಎಚ್ಚರಿಕೆ ನಿರ್ಲಕ್ಷ್ಯ?
ದೂರದೃಷ್ಟಿ ಇಲ್ಲದ ಮತ್ತು ಭಾವನಾತ್ಮಕ ಕಾರಣಗಳಿಗಾಗಿ ಚೀನಾದ ಬೆದರಿಕೆ ಹಗುರವಾಗಿ ತೆಗೆದುಕೊಂಡ ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ  ಪ್ರಧಾನಿ ಜವಾಹರಲಾಲ್ ನೆಹರು ಅವರೇ ಈ ಯುದ್ಧ ಮತ್ತು ಸೋಲಿಗೆ ಮೂಲ ಕಾರಣ ಎನ್ನುವ ಟೀಕೆಗಳಿವೆ.

 ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರು,  `ಚೀನದಿಂದ ಬೆದರಿಕೆ ಇದೆ, ನಿರ್ಲಕ್ಷಿಸಬೇಡಿ~ ಎಂದು 1950ರಲ್ಲಿಯೇ   ಎಚ್ಚರಿಸಿದ್ದರು. ಇದನ್ನು ನೆಹರು ನಿರ್ಲಕ್ಷಿಸಿ ಅದಕ್ಕೆ ಭಾರಿ ಬೆಲೆ ತೆತ್ತರು. 

1962ರ ಭಾರತ - ಚೀನಾ ಯುದ್ಧವು ಸ್ವತಂತ್ರ ಭಾರತದ ಪಾಲಿಗೆ ಅತ್ಯಂತ ಆಘಾತಕಾರಿಯಾಗಿತ್ತು. ಅದೊಂದು ಭದ್ರತಾ ವೈಫಲ್ಯಕ್ಕೆ ಉತ್ತಮ ನಿದರ್ಶನವೂ ಆಗಿತ್ತು. ಈ ಗಡಿ ಯುದ್ಧದಲ್ಲಿ ಭಾರತ ತುಂಬ ಅವಮಾನಕರ ರೀತಿಯಲ್ಲಿ ಸೋಲು ಕಂಡಿತ್ತು.

ಅರುಣಾಚಲ ಪ್ರದೇಶದಲ್ಲಿ ವಿವಾದಾತ್ಮಕ ಮ್ಯಾಕ್‌ಮೋಹನ್ ರೇಖೆಗುಂಟ ಕಮೆಂಗ್ ಮುಂಚೂಣಿ ವಿಭಾಗದಲ್ಲಿ ಚೀನಾ ಅತಿಕ್ರಮಣ ಸಾಧ್ಯತೆ ಹೊರತಾಗಿಯೂ ಭಾರತ ಸಾಕಷ್ಟು ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಿರಲಿಲ್ಲ. ಹೀಗಾಗಿ ಮುಂಚಿನಿಂದಲೂ ಸನ್ನದ್ಧ ಸ್ಥಿತಿಯಲ್ಲಿದ್ದ ಚೀನಾದ ಪಡೆಗಳು ಭಾರತದ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸಿದ್ದವು.

ಭಾರತದ ಸಾವಿರಾರು ಸೈನಿಕರು ಹತರಾದರು. ಅನೇಕರು ಸೆರೆಸಿಕ್ಕರು, ನೂರಾರು ಜನರು ಗಾಯಗೊಂಡರು. ಅನೇಕರನ್ನು ಭೂತಾನ್‌ನಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ಭಾರತದ ನೆರವಿಗೆ ಬರಬೇಕು ಎಂದು ನೆಹರು, ಅಮೆರಿಕಕ್ಕೆ ಮನವಿ ಮಾಡಿಕೊಂಡರೂ ಅದಕ್ಕೆ ಮನ್ನಣೆ ದೊರೆತಿರಲಿಲ್ಲ.

ಸೋಲಿಗೆ ಕಾರಣಗಳು...
ಆಕ್ರಮಣದ ಬೆದರಿಕೆ / ಯುದ್ಧ ಸಾಧ್ಯತೆ ಅಂದಾಜು ಮಾಡುವಲ್ಲಿನ ವೈಫಲ್ಯ, ಅಸಮರ್ಪಕ ಬೇಹುಗಾರಿಕೆ, ಸೂಕ್ತ ಶಸ್ತ್ರಾಸ್ತ್ರಗಳಿಲ್ಲದ ಸೇನೆ, ರಾಜತಾಂತ್ರಿಕ ಕೌಶಲ್ಯ ಕೊರತೆ ಮತ್ತಿತರ ಕಾರಣಗಳಿವೆ.1950ರಲ್ಲಿಯೇ ಚೀನಾ ಈ ಯುದ್ಧಕ್ಕೆ ಸಿದ್ಧತೆ ನಡೆಸಿತ್ತು. ಟಿಬೆಟ್ ಬಗ್ಗೆ ಭಾರತ ಸರ್ಕಾರದ ಧೋರಣೆಯೇ ಚೀನಾ ಸರ್ಕಾರದ ಕಣ್ಣು ಕೆಂಪಗಾಗಿಸಿತ್ತು. ಚೀನಾದ `ಪೀಪಲ್ಸ್ ಲಿಬರೇಷನ್ ಆರ್ಮಿ~ 1950ರಲ್ಲಿ ಟಿಬೆಟ್ ಆಕ್ರಮಿಸಿಕೊಂಡಿತ್ತು.

ಟಿಬೆಟ್ ವಿಮೋಚನೆಗೆ ಸಂಬಂಧಿಸಿದಂತೆ ಭಾರತ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎನ್ನುವ ನಿರ್ಧಾರಕ್ಕೆ ಚೀನಾ ಸರ್ಕಾರ ಬಂದಾಗಿತ್ತು.ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶದ ಬಗ್ಗೆ 1954ರಲ್ಲಿ ಪ್ರಧಾನಿ ನೆಹರೂ ಹೊಸ ನಕ್ಷೆ ಪ್ರಕಟಿಸಿ, ಈ ಬಗ್ಗೆ ಯಾರ ಜತೆಗೂ ಸಂಧಾನ ನಡೆಸುವುದಿಲ್ಲ ಎಂದು ಘೋಷಿಸಿದ್ದರು. ಇದು ಗಡಿ ವಿವಾದಕ್ಕೆ ಬೀಜ ಬಿತ್ತಿತ್ತು.

ಟಿಬೆಟ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿದ್ದಂತೆ ಟಿಬೆಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ 1959ರಲ್ಲಿ ಭಾರತಕ್ಕೆ ಪಲಾಯನ  ಮಾಡಿ ರಾಜಕೀಯ ಆಶ್ರಯ ಪಡೆದಿದ್ದರು.  ಇಲ್ಲಿಂದ ಚೀನಾದ ಭಾರತ ವಿರೋಧಿ ತೀಕ್ಷ್ಣ ಸ್ವರೂಪ ಪಡೆದುಕೊಂಡಿತ್ತು. ಕೊನೆಗೂ ಗಡಿ ಅತಿಕ್ರಮಿಸಿ ಕಾಲು ಕೆದರಿ ಯುದ್ಧಕ್ಕೆ ಇಳಿದಿತ್ತು.

ಸೇನಾ ಸಾಮರ್ಥ್ಯ ಹೋಲಿಕೆ
ಇಂದಿಗೂ ಸೇನಾ ಸಮತೋಲನ ಚೀನಾದ ಕಡೆಯೇ ವಾಲುತ್ತದೆ. ಒಂದು ವೇಳೆ ಇನ್ನೊಂದು ಯುದ್ಧ ನಡೆದರೆ, ಚೀನಾಕ್ಕೆ ಭಾರತ ಸುಲಭದ ತುತ್ತು ಆಗಲಾರದು ಎನ್ನುವುದೂ ನಿಜ. 50 ವರ್ಷಗಳ ಹಿಂದೆ ಭಾರತದ ಸೇನೆಗೆ ಅನುಭವ ಕೊರತೆ ಇತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಇದ್ದಿರಲಿಲ್ಲ.  ಈಗಲೂ ಸೇನಾ ಸಾಮರ್ಥ್ಯದಲ್ಲಿ ಚೀನಾ ಮುಂದಿದ್ದರೂ, ಭಾರತವನ್ನು ಸುಮ್ಮನೆ ಕೆಣಕುವ ಹುಚ್ಚು ಸಾಹಸ ಮಾಡಲಿಕ್ಕಿಲ್ಲ. ಇದಕ್ಕೆ ನಮ್ಮ ಸೇನಾ ಸಾಮರ್ಥ್ಯ ಸಾಕಷ್ಟು ಬಲಗೊಂಡಿರುವುದೇ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.