ADVERTISEMENT

ಭಾರತ ಮತ್ತು ಚೀನಾ ನಡುವೆ ಮಾತಿನ ಪರಂಪರೆಗೆ ಮೋದಿ ಕರೆ

ಭಾರತ–ಚೀನಾ ಅನೌಪಚಾರಿಕ ಶೃಂಗ ಸಭೆ: ಮುಂದಿನ ಬಾರಿ ಭಾರತದಲ್ಲಿ

ಪಿಟಿಐ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST
ವುಹಾನ್‌ನಲ್ಲಿರುವ ಹುಬೇ ಪ್ರಾದೇಶಿಕ ವಸ್ತುಸಂಗ್ರಹಾಲಯಲದಲ್ಲಿದ್ದ ಸಾಂಪ್ರದಾಯಿಕ ಸಂಗೀತ ಉಪಕರಣವನ್ನು ನುಡಿಸಲು ಮೋದಿ ಯತ್ನಿಸಿದರು  – ಎಎಫ್‌ಪಿ ಚಿತ್ರ
ವುಹಾನ್‌ನಲ್ಲಿರುವ ಹುಬೇ ಪ್ರಾದೇಶಿಕ ವಸ್ತುಸಂಗ್ರಹಾಲಯಲದಲ್ಲಿದ್ದ ಸಾಂಪ್ರದಾಯಿಕ ಸಂಗೀತ ಉಪಕರಣವನ್ನು ನುಡಿಸಲು ಮೋದಿ ಯತ್ನಿಸಿದರು – ಎಎಫ್‌ಪಿ ಚಿತ್ರ   

ವುಹಾನ್‌ : ಭಾರತ ಮತ್ತು ಚೀನಾ ನಡುವೆ ಇದೇ ಮೊದಲ ಬಾರಿಗೆ ನಡೆದ ನಿಯೋಗ ಮಟ್ಟದ ಅನೌಪಚಾರಿಕ ಶೃಂಗ ಸಭೆಯು ಎರಡೂ ದೇಶಗಳ ನಡುವಣ ಪರಂಪರೆಯಾಗಿ ಮುಂದುವರಿಯಬೇಕು. ಮುಂದಿನ ವರ್ಷ ಈ ಶೃಂಗ ಸಭೆಯನ್ನು ಭಾರತದಲ್ಲಿ ನಡೆಸಲು ತಾವು ಉತ್ಸುಕರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಇಂತಹ ಮಾತುಕತೆ ಆಗಾಗ ನಡೆಯುತ್ತಿರಬೇಕು ಎಂದರು.

ತಮ್ಮ ದೇಶಗಳ ಜನರಿಗಾಗಿ ಮತ್ತು ಇಡೀ ಜಗತ್ತಿನ ಒಳಿತಿಗಾಗಿ ಕೆಲಸ ಮಾಡುವ ‘ದೊಡ್ಡ ಅವಕಾಶ’ ಭಾರತ ಮತ್ತು ಚೀನಾ ಮುಂದಿದೆ ಎಂದು ಮೋದಿ ಅವರು ಷಿ ಅವರಿಗೆ ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಶತಮಾನಗಳಿಂದ ಇದ್ದ ಸೌಹಾರ್ದ ಸಂಬಂಧವನ್ನು ಮೋದಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ADVERTISEMENT

ಕಳೆದ ವರ್ಷ ದೋಕಲಾದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಣ 73 ದಿನಗಳ ಮುಖಾಮುಖಿ ಬಳಿಕ ವಿಶ್ವಾಸ ಮರುಸ್ಥಾಪನೆ ಹಾಗೂ ಸಂಬಂಧ ವೃದ್ಧಿಯ ಪ್ರಯತ್ನದ ಭಾಗವಾಗಿ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಚೀನಾದ ಕ್ರಾಂತಿಕಾರಿ ನಾಯಕ
ಮಾವೊ ಅವರ ನೆಚ್ಚಿನ ರಜಾ ತಾಣವಾದ ವುಹಾನ್‌ನಲ್ಲಿ ಇದು ನಡೆಯುತ್ತಿದೆ.

ಷಿ ಅವರು ಎರಡು ಬಾರಿ ರಾಜಧಾನಿ ಬೀಜಿಂಗ್‌ನಿಂದ ಹೊರಗೆ ಬಂದು ತಮ್ಮನ್ನು ಸ್ವಾಗತಿಸಿರುವುದರಿಂದ ಭಾರತ ಜನ ಹೆಮ್ಮೆ ಪಟ್ಟುಕೊಂಡಿದ್ದಾರೆ ಎಂದು ಮೋದಿ ಹೇಳಿದರು. ಮೋದಿ ಅವರು 2015ರಲ್ಲಿ ಷಿ ಹುಟ್ಟೂರು ಕ್ಸಿಯಾನ್‌ಗೆ ಭೇಟಿ ನೀಡಿದ್ದರು. ಆಗಲೂ ಅಲ್ಲಿ ಷಿ ಅವರು ಮೋದಿಯನ್ನು ಬರಮಾಡಿಕೊಂಡಿದ್ದರು.

‘ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವಣ ಸಂಬಂಧ ನಿಕಟವಾಗಿದೆ. ಸಕಾರಾತ್ಮಕ ಪ್ರಗತಿ ಸಾಧ್ಯವಾಗಿದೆ. ಐದು ವರ್ಷಗಳಲ್ಲಿ ನಾವು ಬಹಳ ಸಾಧನೆ ಮಾಡಿದ್ದೇವೆ. ಹಲವು ಬಾರಿ ಭೇಟಿಯಾಗಿದ್ದೇವೆ’ ಎಂದು ಷಿ ಹೇಳಿದರು.

ಪ್ರಧಾನಿಯಾದ ಬಳಿಕ ಮೋದಿ ಅವರು ಚೀನಾಕ್ಕೆ ನೀಡಿದ ನಾಲ್ಕನೇ ಭೇಟಿ ಇದು. ಜೂನ್‌ 9–10ರಂದು ಚೀನಾದ ಕ್ವಿಂಗ್‌ಡಾವೊದಲ್ಲಿ ನಡೆಯಲಿರುವ ಶಾಂಗೈ ಸಹಕಾರ ಸಂಘಟನೆ ಸಭೆಯಲ್ಲಿಯೂ ಅವರು ಭಾಗವಹಿಸಲಿದ್ದಾರೆ.
**
ದೋಕಲಾ ಬಗ್ಗೆ ಮಾತನಾಡಿ: ಒತ್ತಾಯ 
(ನವದೆಹಲಿ ವರದಿ): ಷಿ ಜಿನ್‌ಪಿಂಗ್‌ ಜತೆಗಿನ ಚರ್ಚೆಯ ಸಂದರ್ಭದಲ್ಲಿ ದೋಕಲಾ ಬಿಕ್ಕಟ್ಟು ಮತ್ತು ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ವಿಚಾರಗಳನ್ನೂ ಪ್ರಸ್ತಾಪಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೆನಪಿಸಿದ್ದಾರೆ.

‘ನಿಮ್ಮ ‘ಕಾರ್ಯಸೂಚಿ ಇಲ್ಲದ’ ಚೀನಾ ಭೇಟಿಯ ನೇರ ಪ್ರಸಾರವನ್ನು ಸುದ್ದಿ ವಾಹಿನಿಯಲ್ಲಿ ನೋಡಿದೆ. ನೀವು ಉದ್ವಿಗ್ನರಾದಂತೆ ಕಂಡಿತು’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

‘ಎರಡು ವಿಚಾರಗಳನ್ನು ಮಾತನಾಡಲು ನೆನಪಿಸುತ್ತಿದ್ದೇನೆ: ಮೊದಲನೆಯದಾಗಿ, ದೋಕಲಾ ಬಿಕ್ಕಟ್ಟು. ಎರಡನೆಯದಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಇದು ಭಾರತದ ಭೂಭಾಗ) ಮೂಲಕ ಹಾದು ಹೋಗುವ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌. ಈ ನಿರ್ಣಾಯಕ ವಿಚಾರಗಳ ಬಗ್ಗೆ ನೀವು ಮಾತನಾಡುವುದನ್ನು ಕೇಳಲು ಭಾರತ ಬಯಸುತ್ತಿದೆ. ನಿಮಗೆ ನಮ್ಮ ಬೆಂಬಲವಿದೆ’ ಎಂದು ಅವರು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಸದಸ್ಯರೂ ಆಗಿರುವ ರಾಹುಲ್‌, ಸಮಿತಿಯ ಸಭೆಗಳಲ್ಲಿ ದೋಕಲಾ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು.
**
ನನ್ನನ್ನು ಸ್ವಾಗತಿಸುವುದಕ್ಕಾಗಿ ನೀವು ಎರಡು ಬಾರಿ ಬೀಜಿಂಗ್‌ನಿಂದ ಹೊರಗೆ ಬಂದಿದ್ದೀರಿ. ಬಹುಶಃ ಇಂತಹ ಗೌರವಕ್ಕೆ ಪಾತ್ರವಾದ ಭಾರತದ ಮೊದಲ ಪ್ರಧಾನಿ ನಾನಾಗಿರಬಹುದು
– ನರೇಂದ್ರ ಮೋದಿ, ಪ್ರಧಾನಿ
**
ಎರಡೂ ದೇಶಗಳ ಜನಸಂಖ್ಯೆ 260 ಕೋಟಿಗೂ ಹೆಚ್ಚು. ಇದು ಅಭಿವೃದ್ಧಿಯ ಬಹುದೊಡ್ಡ ಅವಕಾಶ ಒದಗಿಸಿದೆ. ಜಾಗತಿಕವಾಗಿ ನಮ್ಮ ದೇಶಗಳ ಪ್ರಭಾವ ಹೆಚ್ಚುತ್ತಲೇ ಇದೆ.
– ಷಿ ಜಿನ್‌ಪಿಂಗ್‌, ಚೀನಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.