ADVERTISEMENT

ಭಾರತ- ವಿಯೆಟ್ನಾಂ ಮಹತ್ವದ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಚೀನಾದ ಬೆದರಿಕೆಯಿಂದ ಧೃತಿಗೆಡದ ವಿಯೆಟ್ನಾಂ ಮತ್ತು ಭಾರತವು ಚೀನಾದ ದಕ್ಷಿಣ ಸಮುದ್ರದಲ್ಲಿ ತೈಲ ನಿಕ್ಷೇಪ ಪತ್ತೆಹಚ್ಚುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬುಧವಾರ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಇದರ ಜೊತೆಗೆ ವ್ಯಾಪಾರ ವಹಿವಾಟು, ಭದ್ರತೆ ಬಲಪಡಿಸುವುದು ಸೇರಿದಂತೆ ಒಟ್ಟು ಆರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 

ವಿಯೆಟ್ನಾಂ ಅಧ್ಯಕ್ಷ ಟ್ರುವಾಂಗ್ ಟಾನ್ ಸಾಂಗ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಸಮಗ್ರ ಮಾತುಕತೆಯ ಬಳಿಕ ಕರಾರುಗಳಿಗೆ ಸಹಿ ಹಾಕಿದರು. 

`ಭಾರತ ಮತ್ತು ವಿಯೆಟ್ನಾಂ ಕಡಲತೀರದ ನೆರೆಹೊರೆಯವರಾಗಿದ್ದು, ಭಯೋತ್ಪಾದನೆ, ಕಳ್ಳಸಾಗಣೆ, ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು ಬೆದರಿಕೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಉಭಯ ರಾಷ್ಟ್ರಗಳ ನಡುವೆ ಸಮಗ್ರ ಮಾತುಕತೆ ಅಗತ್ಯ ಎಂಬುದನ್ನು ನಾವು ಮನಗಂಡಿದ್ದೇವೆ~ ಎಂದು ಮನಮೋಹನ್ ಸಿಂಗ್ ತಿಳಿಸಿದರು.

ಇದೇ ವೇಳೆ ತೈಲ ನಿಕ್ಷೇಪಗಳ ಪತ್ತೆ, ಉಭಯ ರಾಷ್ಟ್ರಗಳಿಗೆ ತೈಲ ಮತ್ತು ಅನಿಲ ಪೂರೈಕೆ ಮಾಡುವ ಬಗ್ಗೆ ಎರಡೂ ಸರ್ಕಾರಗಳ  ಅಧೀನದಲ್ಲಿನ ತೈಲ ಕಂಪೆನಿಗಳ ನಡುವೆ ಒಪ್ಪಂದ ನಡೆಸಲಾಗಿದೆ. ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಭಾರತ ತೈಲ ನಿಕ್ಷೇಪ ಪತ್ತೆ ಕಾರ್ಯದಲ್ಲಿ ತೊಡಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಚೀನಾ, ಅದು ತನಗೆ ಸೇರಿದ ಪ್ರದೇಶ ಎಂದು ಬೆದರಿಕೆ ಒಡ್ಡಿದೆ. ಆದರೆ ಬೆದರಿಕೆಯಿಂದ ವಿಚಲಿತಗೊಳ್ಳದ ವಿಯೆಟ್ನಾಂ ಮತ್ತು ಭಾರತ, ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಅದು ವಿಯೆಟ್ನಾಂಗೆ ಸೇರ್ದ್ದಿದು ಎಂದು ಪ್ರತಿಪಾದಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.