ADVERTISEMENT

ಭಿಕ್ಷಾಟನೆ ಚಾಳಿ ನಿಲ್ಲಿಸದ ರಷ್ಯಾ ಪ್ರವಾಸಿಗ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST

ಚೆನ್ನೈ: ತಮಿಳುನಾಡಿನ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರವಾಸಿಗನನ್ನು ಪೊಲೀಸರು ರಕ್ಷಿಸಿ, ಅಧಿಕಾರಿಗಳಿಗೆ ಒಪ್ಪಿಸಿದ ಬಳಿಕವೂ ಅತ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ್ದಾನೆ.

ಕುಮಾರಕೊಟ್ಟಂ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ 24 ವರ್ಷದಿಂದ ರಷ್ಯಾದ ಪ್ರವಾಸಿಗನನ್ನು ಪೊಲೀಸರು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಆದರೆ ದುಡ್ಡಿನ ರುಚಿ ನೋಡಿದ್ದ ಇವ್ಗಿನಿ ಬೆರ್ಡನಿ ಕೊವ್, ಚೆನ್ನೈನಲ್ಲಿ ಮತ್ತೆ ಭಿಕ್ಷಾಟನೆಗೆ ಇಳಿದಿದ್ದಾನೆ.

ಸುಲಭವಾಗಿ ಹಣ ಸಿಗುವಾಗ ಅದನ್ನು ತಪ್ಪಿಸಿಕೊಳ್ಳಲು ಇಷ್ಟಪಡದ ಕೋವ್, ಭಾರತದಲ್ಲೇ ಉಳಿಯುವ ಆಲೋಚನೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋವ್ ಅಗತ್ಯವಿರುವ ಪ್ರಯಾಣ ದಾಖಲೆಗಳನ್ನು ಹೊಂದಿದ್ದು, ಆತನನ್ನು ಗಡಿಪಾರು ಮಾಡುವುದು ಕಷ್ಟ ಎಂದೂ ತಿಳಿಸಿದ್ದಾರೆ.

ADVERTISEMENT

ಘಟನೆ ಹಿನ್ನೆಲೆ:  ಕೆಲ ವಾರದ ಹಿಂದೆ ಮಾಸ್ಕೋದಿಂದ ಭಾರತಕ್ಕೆ ಬಂದಿದ್ದ ಇವ್ಗಿನಿ ಬೆರ್ಡನಿ ಕೊವ್, ತಮಿಳುನಾಡಿನ ಕಂಚಿಪುರದಲ್ಲಿ ನೆಲೆಸಿದ್ದ. ಈತನ ಎಟಿಎಂ ಕಾರ್ಡ್ ಸ್ಥಗಿತಗೊಂಡಿದ್ದರಿಂದ ದೇವಸ್ಥಾನದ ಮುಂದೆ ಭಿಕ್ಷೆ ಬೇಡಲು ಶುರುಮಾಡಿದ್ದ. ಈ ಬಗ್ಗೆ ದೂರು ಬಂದ ಕಾರಣ, ಠಾಣೆಗೆ ಕರೆತಂದ ಪೊಲೀಸರು ಸ್ವಲ್ಪ ಹಣವನ್ನೂ ನೀಡಿ, ದೂತಾವಾಸ ಕಚೇರಿ ಸಂಪರ್ಕಿಸುವ ಸಲುವಾಗಿ ಚೆನ್ನೈಗೆ ಕಳುಹಿಸಿದ್ದರು.

ಆದರೆ ಕೋವ್ ತನ್ನ ಹಳೆ ವೃತ್ತಿ ಮುಂದುವರಿಸಿದ. ಶನಿವಾರದಿಂದ ಚೆನ್ನೈನ ಜನನಿಬಿಡ ಟಿ.ನಗರ ಪ್ರದೇಶದಲ್ಲಿ ಈತ ಮತ್ತೆ ಭಿಕ್ಷೆ ಬೇಡುತ್ತಿರುವನ್ನು ಜನರ ಗಮನಿಸಿದ್ದಾರೆ. ತನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುವವರಿಗೆ ಈತ ₹100 ದರ ವಿಧಿಸುತ್ತಿದ್ದನಂತೆ.  ದೇವಸ್ಥಾನಗಳಲ್ಲಿ ಉಚಿತವಾಗಿ ನೀಡುತ್ತಿದ್ದ ಊಟ ಮಾಡಿ ಆರಾಮವಾಗಿ ಕಾಲ ಕಳೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ರಷ್ಯಾ ಪ್ರವಾಸಿಯೊಬ್ಬ ಭಿಕ್ಷೆ ಬೇಡುತ್ತಿರುವ ಚಿತ್ರ ವೈರಲ್ ಆದ ಬಳಿಕ, ಹಲವರು ಬಂದು ಈತನಿಗೆ ಹಣ ನೀಡಲಾರಂಭಿಸಿದರು. ಈ ಮಾಹಿತಿ ಪಡೆದ ಪೊಲೀಸರು ಪುನಃ ಕೋವ್‌ನನ್ನು ವಶಕ್ಕೆ ಪಡೆದು, ರಷ್ಯಾ ದೂತಾವಾಸ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.