ADVERTISEMENT

ಭೂಮಾಲೀಕನೇ ಖನಿಜ ಸಂಪತ್ತಿನ ಒಡೆಯ: `ಸುಪ್ರೀಂ'

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಭೂಮಾಲೀಕನೇ ಖನಿಜ ಸಂಪತ್ತಿನ ಒಡೆಯ: `ಸುಪ್ರೀಂ'
ಭೂಮಾಲೀಕನೇ ಖನಿಜ ಸಂಪತ್ತಿನ ಒಡೆಯ: `ಸುಪ್ರೀಂ'   

ನವದೆಹಲಿ (ಪಿಟಿಐ): ಖನಿಜ ಸಂಪತ್ತಿನ ಮಾಲೀಕತ್ವ ಆಯಾ ನೆಲದ ಒಡೆಯನ ವಶದಲ್ಲಿ ಇರಲಿದೆಯೇ ಹೊರತು ಸರ್ಕಾರದ ಸ್ವಾಧೀನದಲ್ಲಿ ಅಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾ.ಆರ್.ಎಂ. ಲೋಧಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು, ದೇಶದಲ್ಲಿನ ಖನಿಜ ಸಂಪತ್ತು ಸರ್ಕಾರದ ಆಸ್ತಿ ಎಂಬ ಕಾನೂನೇನೂ ಇಲ್ಲ ಎಂದು ಹೇಳಿದೆ.

ಖನಿಜ ಸಂಪತ್ತು ಸರ್ಕಾರದ ಆಸ್ತಿ ಎಂದು ಕೇರಳದ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಕೇರಳದ ಕೆಲವು ಭೂಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಆದೇಶ ಜಾರಿ ಮಾಡಿದೆ.

`ಖನಿಜ ಸಂಪತ್ತಿನ ಒಡೆತನ ಸರ್ಕಾರಕ್ಕೆ ಸೇರಬೇಕು ಎಂದು ಹೇಳುವಂತಹ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಆ ಸಂಪತ್ತು ಆಯಾ ಭೂಮಿಯ ಮಾಲೀಕನ ಒಡೆತನಕ್ಕೆ ಸೇರುತ್ತದೆ.  ಕೆಲವೊಂದು ಪ್ರಕ್ರಿಯೆಗಳ ಮೂಲಕ ಆ ಭೂಮಿಯನ್ನು ಮಾಲೀಕನಿಂದ ಸ್ವಾಧೀನಪಡಿಸಿಕೊಂಡಿದ್ದರೆ ಮಾತ್ರ ಆ ಸಂಪತ್ತಿನ ಒಡೆತನ ಆತನಿಗೆ ಇರುವುದಿಲ್ಲ' ಎಂದೂ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ಪರವಾನಗಿ ಅಥವಾ ಗುತ್ತಿಗೆ ಪಡೆಯದೇ ಯಾವುದೇ ಗಣಿಗಾರಿಕೆ ನಡೆಸಲು ನಿರ್ಬಂಧಿಸುವ ಗಣಿ ಮತ್ತು ಖನಿಜಗಳ ಕಾಯ್ದೆ (ಅಭಿವೃದ್ಧಿ ಮತ್ತು ನಿಯಂತ್ರಣ) - 1957ರ 425ನೇ ವಿಭಾಗದ ಅನ್ವಯ, ಮಾಲೀಕನೊಬ್ಬ ತನ್ನ ಜಮೀನಿನಲ್ಲಿನ ಸಂಪನ್ಮೂಲಗಳ ಮೇಲೆ ಸ್ವಾಮ್ಯತೆ ಹಕ್ಕು ಪ್ರತಿಪಾದಿಸುವಂತಿಲ್ಲ ಎಂಬ ವಾದವನ್ನು ನ್ಯಾಯಪೀಠ ತಳ್ಳಿಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.