ADVERTISEMENT

‘ಭ್ರಷ್ಟಾಚಾರ’ ಆರೋಪ: ಅಧಿಕಾರಿ ಬಂಧನಕ್ಕೆ ಆದೇಶ

ಪಿಟಿಐ
Published 12 ಮೇ 2018, 19:30 IST
Last Updated 12 ಮೇ 2018, 19:30 IST

ಕುರುಕ್ಷೇತ್ರ, ಹರಿಯಾಣ: ತನ್ನ ಮೇಲಿರುವ ಭ್ರಷ್ಟಾಚಾರ ಆರೋಪ ಕುರಿತ ವಿವರಣೆ ನೀಡುವಂತೆ ಆರೋಗ್ಯ ಇಲಾಖೆಯ ಉಪವಿಭಾಗೀಯ ಅಧಿಕಾರಿ (ಎಸ್‌ಡಿಒ) ಮಾಡಿದ ಮನವಿಯನ್ನು ತಳ್ಳಿ ಹಾಕಿದ ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌, ಅಧಿಕಾರಿಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎನ್ನಲಾದ ವಿಡಿಯೊ ವೈರಲ್‌ ಆಗಿದೆ.

ಕೈಥಲ್‌ದಲ್ಲಿ ನಡೆದ ಇಲಾಖೆಯ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ವಿಜ್‌, ‘ಆತನನ್ನು ಬಂಧಿಸಿ’ ಎಂದು ಪೊಲೀಸರಿಗೆ ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿ ಇದೆ.

ಎಸ್‌ಡಿಒ ವೇದ್‌ ಪಾಲ್‌ ಗುತ್ತಿಗೆದಾರ ದಿಗ್ವಿಜಯ್‌ಸಿಂಗ್ ಲಂಚ ಕೇಳಿದ ಆರೋಪ ಮಾಡಿದ್ದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ವಿಜ್‌, ವೇದ್ ಪಾಲ್‌ ಬಂಧನಕ್ಕೆ ಆದೇಶಿಸಿದರು. ತನ್ನ ವಿರುದ್ಧದ ಆರೋಪ ನಿರಾಕರಿಸಿ, ಕೆಲವು ದಾಖಲೆ ಗಳನ್ನು ಹಾಜರುಪಡಿಸಲು ಮುಂದಾದ ವೇದ್ ಪಾಲ್ ವಿರುದ್ಧ ಸಚಿವ ಹರಿಹಾಯ್ದರು. ಆಗ, ಸಚಿವ ವಿಜ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವೇದ್‌ ಪಾಲ್‌, ‘ಔರಂಗಜೇಬ್‌ನ ಆಡಳಿತದಂತೆ ಈಗಿನ ಸ್ಥಿತಿ ಇದೆ. ಅವರ ಆಳ್ವಿಕೆ ಇದಕ್ಕಿಂತಲೂ ಉತ್ತಮವಾಗಿತ್ತು’ ಎಂದು ಗೊಣಗಿದರು. ಈ ಮಾತಿಗೆ ಮತ್ತಷ್ಟೂ ವ್ಯಗ್ರರಾದ ಸಚಿವ ವಿಜ್‌, ‘ಆತನನ್ನು ಹೊರ ಹಾಕಿ’ ಎಂದು ಭದ್ರತಾ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.