ADVERTISEMENT

ಭ್ರಷ್ಟಾಚಾರ ನಿಯಂತ್ರಣ: ಶೀಘ್ರ ಕೇಂದ್ರದಿಂದ ಹೊಸ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

 ನವದೆಹಲಿ (ಪಿಟಿಐ): ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿರುವ ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಸದ್ಯವೇ ಪ್ರಕಟಿಸಲಿದೆ. ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಶೀಘ್ರ ಶಿಕ್ಷೆ  ಕ್ರಮ ಸೇರಿದಂತೆ ಹಲವು ಕಟ್ಟುಪಾಡುಗಳನ್ನು ಇದು ಒಳಗೊಂಡಿದೆ.

ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಚಳವಳಿ ನಿರತರಾಗಿದ್ದ ಸಂದರ್ಭದಲ್ಲಿ ಸರ್ಕಾರ ಮೂವರು ತಜ್ಞರ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು. ಈ ಸಮಿತಿ ನೀಡಿದ ವರದಿ ಆಧರಿಸಿ ಈ ಮಾರ್ಗಸೂಚಿ ನಿಗದಿ ಮಾಡಲಾಗಿದೆ.

ಎಲ್ಲ ದೊಡ್ಡಮಟ್ಟದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು 12 ತಿಂಗಳ ಒಳಗೆ ಮುಗಿಸಬೇಕು; ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು; ತನಿಖೆ ಮುಗಿದ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು; ಸಣ್ಣ ಪ್ರಮಾಣದ ಅವ್ಯವಹಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಮುಗಿಸಬೇಕು- ಎಂಬ ಸಲಹೆಗಳು ತಜ್ಞರ ಸಮಿತಿ ವರದಿಯಲ್ಲಿ ಸೇರಿವೆ.

ತನಿಖೆಗಾಗಿ ನೇಮಿಸುವ ಸಮಿತಿಯು ಪ್ರಸ್ತುತ ಸೇವೆಯಲ್ಲಿರುವ ಹಾಗೂ ನಿವೃತ್ತ ಸರ್ಕಾರಿ ನೌಕರರನ್ನು ಒಳಗೊಂಡಿರಬೇಕು; ತನಿಖಾ ಸಮಿತಿಗೆ ಸಂಭಾವನೆ ಮೊತ್ತ ಹೆಚ್ಚಿಸಬೇಕು; ರಾಜ್ಯಗಳಲ್ಲಿ ಶಾಸನಬದ್ಧ ಜಾಗೃತ ಆಯೋಗಗಳನ್ನು ರಚಿಸಬೇಕು; ತಪ್ಪಿತಸ್ಥರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ಜತೆಗೆ ಪಿಂಚಣಿ ಮತ್ತು ಪ್ರೋತ್ಸಾಹ ಧನ (ಗ್ರಾಚುಯಿಟಿ) ಕಡಿತಗೊಳಿಸಬೇಕು- ಇವು ಸಮಿತಿಯ ಇನ್ನಿತರ ಶಿಫಾರಸುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.