ADVERTISEMENT

ಭ್ರಷ್ಟಾಚಾರ: ನಿರಾಶಾವಾದ ಬೇಡ- ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರ ತಡೆಗಟ್ಟಲು ಆಗುವುದೇ ಇಲ್ಲ ಎನ್ನುವಂತಹ ವಿವೇಚನಾರಹಿತವಾದ ನಕಾರಾತ್ಮಕ ಹಾಗೂ ನಿರಾಶಾವಾದದ ಸನ್ನಿವೇಶವನ್ನು ಹುಟ್ಟುಹಾಕಲಾಗುತ್ತಿದೆ ಎಂದು ಕಿಡಿಕಾರಿರುವ ಪ್ರಧಾನಿ ಮನಮೋಹನ್ ಸಿಂಗ್, ಕಾರ್ಪೊರೇಟ್ ವಲಯವನ್ನೂ ಒಳಗೊಂಡಂತೆ ಭ್ರಷ್ಟಾಚಾರವನ್ನು ತಡೆಗಟ್ಟಲು ಬಿಗಿಯಾದ ಕಾನೂನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬುಧವಾರ ನಡೆದ ಸಿಬಿಐ ಮತ್ತು ರಾಜ್ಯಗಳ ಭ್ರಷ್ಟಚಾರ ತಡೆ ಬ್ಯೂರೊಗಳ 19ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, `ನಿರಾಶಾವಾದ ಧೋರಣೆಯನ್ನು ಬಿತ್ತುವುದರಿಂದ ದೇಶಕ್ಕೆ ಯಾವುದೇ ರೀತಿಯಲ್ಲೂ ಒಳಿತಾಗುವುದಿಲ್ಲ. ಬದಲಿಗೆ ವರ್ಚಸ್ಸು ಕುಗ್ಗುತ್ತದೆ. ಜೊತೆಗೆ ಕಾರ್ಯಾಂಗದ ನೈತಿಕ ಅಧಃಪತನಕ್ಕೂ ಕಾರಣವಾಗುತ್ತದೆ~ ಎಂದರು.

ಭ್ರಷ್ಟಾಚಾರವನ್ನು ತಡೆಗಟ್ಟುವ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಸಂದಿಗ್ಧತೆ ಇಲ್ಲ. ಆಡಳಿತದಲ್ಲಿ ನಿಸ್ಪೃಹತೆ, ಪಾರದರ್ಶಕತೆ, ಉತ್ತರದಾಯಿತ್ವ ಇರಬೇಕು ಎಂಬುದು ಸರ್ಕಾರದ ಆಶಯ ಕೂಡ. ಆದ್ದರಿಂದ ಭ್ರಷ್ಟಾಚಾರ ತಡೆ ಕಾಯ್ದೆಗೆ ಅಗತ್ಯವಾದ ತಿದ್ದುಪಡಿಗಳನ್ನು ತರುವ ಮೂಲಕ ಬಿಗಿಯಾದ ಕಾಯ್ದೆಯನ್ನು ರಚಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

`ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲೇ ಬೃಹತ್ ಪ್ರಮಾಣದ ಭ್ರಷ್ಟಾಚಾರಕ್ಕೆ ಆಸ್ಪದವಾಗುತ್ತಿದ್ದು ಇಂತಹದ್ದನ್ನು ಹತ್ತಿಕ್ಕಲು ಕಾರ್ಪೊರೇಟ್ ವಲಯವೂ ಒಳಗೊಂಡಂತೆ ಬಿಗಿಯಾದ ಕಾನೂನುಗಳನ್ನು ರಚಿಸಲಾಗುವುದು ಜೊತೆಗೆ ಪ್ರಾಮಾಣಿಕ ಮತ್ತು ದಕ್ಷ ಸರ್ಕಾರಿ ನೌಕರರನ್ನು ರಕ್ಷಿಸಲಾಗುವುದು~ ಎಂದು ಭರವಸೆ ನೀಡಿದರು.

ಭಾರಿ ವಿಪತ್ತು- ಜೋಶಿ: ಭ್ರಷ್ಟಾಚಾರದ ಪೋಷಣೆಗೆ ಸರ್ಕಾರಿ ಯಂತ್ರ ಮತ್ತು ಶಾಸನಾತ್ಮಕ ವ್ಯವಸ್ಥೆಯನ್ನು ಬಳಸುವುದರಿಂದ ಭಾರಿ ವಿಪತ್ತನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ಧುರೀಣ ಮುರಳಿ ಮನೋಹರ್ ಜೋಶಿ ಅವರು ಎಚ್ಚರಿಕೆ ನೀಡಿದ್ದಾರೆ.
 
ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ಸಿಂಗ್ ಅವರು `ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ವಿವೇಚನಾರಹಿತವಾಗಿ, ನಕಾರಾತ್ಮಕ ಮತ್ತು ನಿರಾಶಾವಾದದ ವಾತಾವರಣ ನಿರ್ಮಾಣ ಮಾಡುವುದರಿಂದ ನಮಗೆ ಒಳಿತಾಗುವುದಿಲ್ಲ~ ಎಂದು ಹೇಳಿದ್ದರು. ಜೋಶಿ ಅವರು ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಪ್ರಧಾನಿ ಅವರ ನಿಲುವು ಭಾರಿ ಅಪಾಯಕಾರಿ ಎಂದು ಹೇಳಿದ್ದಾರೆ.

ರಾಬರ್ಟ್ ವಾರ್ದಾ ಅವರ ಶಂಕಾಸ್ಪದ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಯಬೇಕು ಎಂಬ ತಮ್ಮ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿರುವಂತೆ ವಾದ್ರಾ ಮತ್ತು ಡಿಎಲ್‌ಎಫ್ ಮಧ್ಯೆ ನಡೆದಿರುವ ವ್ಯವಹಾರಗಳ ಸಂಪೂರ್ಣ ತನಿಖೆಯಾಗಬೇಕು, ಆರೋಪ ನಿಜವಾದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಜೋಶಿ  ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT