ADVERTISEMENT

ಮಕ್ಕಳು ವಾಂತಿ ಮಾಡಿದ ಕಾರಣ ಕಲುಷಿತಗೊಂಡ ಗಾಳಿ; ಉಪಹಾರ ಕಾರಣವಲ್ಲ: ರೈಲ್ವೆ ಸಮಿತಿ ವರದಿ

ತೇಜಸ್‌ ಎಕ್ಸ್‌ಪ್ರೆಸ್‌ನಲ್ಲಿ ಅಸ್ವಸ್ಥಗೊಂಡಿದ್ದ 25 ಜನ

ಏಜೆನ್ಸೀಸ್
Published 17 ಅಕ್ಟೋಬರ್ 2017, 3:25 IST
Last Updated 17 ಅಕ್ಟೋಬರ್ 2017, 3:25 IST
ಮಕ್ಕಳು ವಾಂತಿ ಮಾಡಿದ ಕಾರಣ ಕಲುಷಿತಗೊಂಡ ಗಾಳಿ; ಉಪಹಾರ ಕಾರಣವಲ್ಲ: ರೈಲ್ವೆ ಸಮಿತಿ ವರದಿ
ಮಕ್ಕಳು ವಾಂತಿ ಮಾಡಿದ ಕಾರಣ ಕಲುಷಿತಗೊಂಡ ಗಾಳಿ; ಉಪಹಾರ ಕಾರಣವಲ್ಲ: ರೈಲ್ವೆ ಸಮಿತಿ ವರದಿ   

ನವದೆಹಲಿ: ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 25 ಜನ ಅಸ್ವಸ್ಥಗೊಳ್ಳಲು ರೈಲಿನಲ್ಲಿ ನೀಡಲಾಗಿದ್ದ ಉಪಹಾರ ಸೇವನೆ ಕಾರಣವಲ್ಲ. ಇಬ್ಬರು ಮಕ್ಕಳು ಬೋಗಿಯೊಳಗೆ ವಾಂತಿ ಮಾಡಿದ್ದರಿಂದ ಗಾಳಿ ಕಲುಷಿತಗೊಂಡು ಇತರೆ ಪ್ರಯಾಣಿಕರು ಅಸ್ವಸ್ಥರಾಗಿರುವುದಾಗಿ ವಿಚಾರಣೆ ನಡೆಸಿದ ಕೇಂದ್ರ ರೈಲ್ವೆ ಸಮಿತಿ ಸೋಮವಾರ ಹೇಳಿದೆ.

ರೈಲಿನಲ್ಲಿ ನೀಡಲಾಗಿದ್ದ ಉಪಹಾರದ ಗುಣಮಟ್ಟ ಸಮರ್ಪಕವಾಗಿದೆ ಎಂದು ಭಾರತೀಯ ರೈಲ್ವೆಯ ಆಂತರಿಕ ವಿಚಾರಣೆಯ ವರದಿಯಲ್ಲಿ ತಿಳಿಸಿದೆ.

ಗೋವಾ–ಮುಂಬೈ ನಡುವೆ ಸಂಚರಿಸುವ ಉನ್ನತ ಸೌಲಭ್ಯಗಳನ್ನು ಹೊಂದಿರುವ ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ಉಪಹಾರ ಸೇವಿಸಿರುವ ಪ್ರಯಾಣಿಕರ ಪೈಕಿ 25 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ADVERTISEMENT

ವಿಚಾರಣೆ ನಡೆಸಿರುವ ಸಮಿತಿಯು ಘಟನೆಯ ಕುರಿತು ಪ್ರಯಾಣಿಕರನ್ನೇ ಆರೋಪಿಸಿದೆ. ರೈಲಿನ ಬೋಗಿಯೊಳಗೆ ಇಬ್ಬರು ಮಕ್ಕಳು ವಾಂತಿ ಮಾಡಿದ್ದು, ಅದರಿಂದಾಗಿ ಒಳಗಿನ ಗಾಳಿ ಕಲುಷಿತಗೊಂಡು ಇತರೆ ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ ಎಂದಿದೆ. ಪ್ರಯಾಣಿಕರು, ಎಸಿ ಮೆಕಾನಿಕ್‌ ಹಾಗೂ ಇತರೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿರುವ ಸಮಿತಿಯು ಪೂರೈಸಲಾಗಿರುವ ಆಹಾರ ಸಮರ್ಪಕವಾಗಿತ್ತು ಎಂದು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸ ನಿಗಮ(ಐಆರ್‌ಸಿಟಿಸಿ) ವರದಿಯಲ್ಲಿ ಹೇಳಿದೆ.

ಉಪಹಾರಕ್ಕೆಂದು ನೀಡಲಾಗಿದ್ದ ಸೂಪ್‌, ಪೋಹಾ, ಕೇಕ್‌, ಕೋಕಂ ರಸ, ಮ್ಯಾಂಗೋ ಪಂಚ್‌ ಹಾಗೂ ಬ್ರೆಡ್‌ ಸ್ಟಿಕ್‌ಗಳ ಮಾದರಿ ತೆಗೆದು ಗುಣಮಟ್ಟದ ಪರೀಕ್ಷೆ ನಡೆಸಲಾಗಿತ್ತು. ಆದರೆ, ಕೆಟ್ಟ ವಾಸನೆ ಬರುತ್ತಿತ್ತು ಎನ್ನಲಾಗಿರುವ ಆಮ್ಲೆಟ್‌ ಮಾದರಿ ಪರೀಕ್ಷೆ ನಡೆಸಿಲ್ಲ. ಆಮ್ಲೆಟ್‌ ಸೇವಿಸಿರುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ, ಹಾಗಾಗಿ ಅದರ ಪರೀಕ್ಷೆ ನಡೆಸಿಲ್ಲ ಎಂದು ಐಆರ್‌ಸಿಟಿಸಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಹಿಂದು ಪತ್ರಿಕೆ ವರದಿ ಮಾಡಿದೆ. 

ಸೆಮಿ ಹೈಸ್ಪೀಡ್‌ ರೈಲು ತೇಜಸ್‌ ರೈಲಿನಲ್ಲಿ ಭಾನುವಾರ 230 ಪ್ರಯಾಣಿಕರು ಉಪಹಾರ ಸೇವಿಸಿದ್ದಾರೆ. ಇದರಲ್ಲಿ 117 ಸಸ್ಯಾಹಾರ ಹಾಗೂ 113 ಮಾಂಸಹಾರಕ್ಕೆ ಬೇಡಿಕೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.