
ಲಖನೌ: ಗೋರಖಪುರ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆಗಸ್ಟ್ 10ರಿಂದ ಇಲ್ಲಿಯವರೆಗೆ 60ಕ್ಕೂ ಹೆಚ್ಚು ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿವೆ.
ಈ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 30 ಮಕ್ಕಳು ಸಾವಿಗೀಡಾಗಿದ್ದರು. ಈ ರೀತಿ ಸಾವಿಗೀಡಾದವರು ಜಾಪನೀಸ್ ಇನ್‍ಸೆಫಲೈಟಿಸ್ (ಜೆಇ) ಮತ್ತು ಅಕ್ಯೂಟ್ ಇನ್‍ಸೆಫಲೈಟಿಸ್ ಸಿಂಡ್ರೊಮ್‍ನಿಂದ (ಎಇಎಸ್) ಬಳಲುತ್ತಿದ್ದ ಮಕ್ಕಳಾಗಿದ್ದಾರೆ.
ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ದುರಂತ ಸಂಭವಿಸುವುದಕ್ಕೆ ಆಮ್ಲಜನಕದ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದ್ದರೂ, ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೂ ಕಾರಣ ಎಂಬ ಟೀಕೆಯೂ ಕೇಳಿಬರುತ್ತಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಆದಿತ್ಯನಾಥ ಅವರು, ಮಕ್ಕಳ ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿಯ ನೇತೃತ್ವದಲ್ಲಿ ಕೇಂದ್ರ ಸರ್ಕಾರ ತನಿಖಾ ತಂಡವೊಂದನ್ನು ರಚಿಸಿದ್ದು, ಈ ತನಿಖಾ ತಂಡ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ತಪ್ಪು ಯಾರೇ ಮಾಡಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆದಿತ್ಯನಾಥ ಹೇಳಿದ್ದಾರೆ.
ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋರಖಪುರ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ಉತ್ತರಪ್ರದೇಶ ಸರ್ಕಾರ ಶನಿವಾರ ವಜಾ ಮಾಡಿತ್ತು.
ಆಸ್ಪತ್ರೆಗೆ ಭೇಟಿ ನೀಡಿದ ಆದಿತ್ಯನಾಥ, ಭಾವುಕರಾಗಿ ಬಿಟ್ಟರು. ಜೆಇ ಮತ್ತು ಎಇಎಸ್ ನಿಂದ ಬಳಲುತ್ತಿದ್ದ ಮಕ್ಕಳು ಸಾಯುತ್ತಿರುವುದನ್ನು ನಾನು ನೋಡಿದ್ದೇನೆ. ಇದರ ವಿರುದ್ಧ ನಾನು ಚಳವಳಿಯನ್ನು ಆರಂಭಿಸಿದ್ದೇನೆ. ನಾನು ಲೋಕಸಭೆಯಲ್ಲಿ ಈ ವಿಷಯವನ್ನು ಎತ್ತಿದ ನಂತರವೇ ಕೇಂದ್ರ ಸರ್ಕಾರ ವೈದ್ಯಕೀಯ ಕಾಲೇಜುಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಿತ್ತು ಎಂದಿದ್ದಾರೆ.
ಇದೀಗ ಮಕ್ಕಳ ಸಾವಿಗೂ ವಿಪಕ್ಷ ರಾಜಕೀಯ ಬಣ್ಣ ನೀಡುತ್ತಿದೆ. ಕಾಂಗ್ರೆಸ್ ನಾಯಕರು ಮಕ್ಕಳ ಸಾವಿನಲ್ಲಿಯೂ ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.