ADVERTISEMENT

ಮಗುವಿಗೆ ಒತ್ತಾಯವಾಗಿ ಧರ್ಮ ಹೇರಬಾರದು

ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಮುಂಬೈ (ಪಿಟಿಐ): `ಮಗುವಿನ ಮೇಲೆ ಒತ್ತಾಯ ಪೂರ್ವಕವಾಗಿ ಧರ್ಮವನ್ನು ಹೇರುವಂತಿಲ್ಲ' ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕ್ರೈಸ್ತ ಮತಕ್ಕೆ ಸೇರಿದ ತಂದೆ ಹಾಗೂ ಹಿಂದೂ ಧರ್ಮದ ತಾಯಿಗೆ ಜನಿಸಿದ ಮೂರು ವರ್ಷದ ಹೆಣ್ಣುಮಗುವನ್ನು ಹಸ್ತಾಂತರಿಸುವಂತೆ ಕೋರಿ ತಂದೆಯ ಮನೆಯವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಆ ಮಗುವನ್ನು ರೋಮನ್ ಕ್ಯಾಥೊಲಿಕ್ ಆಗಿ ಬೆಳೆಸಬೇಕೆನ್ನುವುದು ಅರ್ಜಿದಾರರರ ವಾದವಾಗಿತ್ತು.

ಈ ಬಾಲಕಿಯ ತಂದೆ ಪತ್ನಿಯನ್ನು ಇರಿದು ಕೊಂದು ಜೈಲು ಸೇರಿದ್ದಾನೆ. ಮಗುವಿನ ಪಾಲನೆಯನ್ನು ಕೋರಿ ತಂದೆ, ಆತನ ಸಹೋದರಿ ಹಾಗೂ ಮಗುವಿನ ಅಜ್ಜ (ತಾಯಿಯ ತಂದೆ) ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

`ನಾವು ಈ ಮಗುವನ್ನು ರೋಮನ್ ಕ್ಯಾಥೊಲಿಕ್ ರಿವಾಜಿನ ಪ್ರಕಾರ ಬೆಳೆಸುತ್ತೇವೆ. ಆಕೆ ಕಾನ್ವೆಂಟ್‌ಗೆ ಹೋಗಬೇಕು' ಎನ್ನುವುದು ಮಗುವಿನ ತಂದೆ ಹಾಗೂ ಆತನ ಸಹೋದರಿಯ ವಾದ.

`ಈ ಬಾಲಕಿಯ ತಂದೆ ತನ್ನ ಪತ್ನಿಯನ್ನು ಕೊಂದು ಕ್ರೈಸ್ತ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ಕೊಲೆ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಈತ ತನ್ನ ಮಗಳಿಗೆ ಕ್ರೈಸ್ತಧರ್ಮವನ್ನು ಬೋಧಿಸುವಂತಿಲ್ಲ. ಅದೂ ಅಲ್ಲದೇ ತಂದೆ ತನ್ನ ಧರ್ಮವನ್ನು ಮಗುವಿನ ಮೇಲೆ ಬಲವಂತವಾಗಿ ಹೇರುವಂತಿಲ್ಲ' ಎಂದು ನ್ಯಾಯಮೂರ್ತಿ ರೋಶನ್ ದಲ್ವಿ ಹೇಳಿದರು.

ತನ್ನ ತಾಯಿಯ ಹತ್ಯೆ ನಂತರದಲ್ಲಿ ಮಗು ಅಜ್ಜಿ ಮನೆಯಲ್ಲಿಯೇ ಬೆಳೆದ ಕಾರಣ ಆಕೆಯನ್ನು ಅವರ ಸುಪರ್ದಿಗೆ ಒಪ್ಪಿಸಲು ಕೋರ್ಟ್ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.