ADVERTISEMENT

ಮಣಿದ ಡಿಎಂಕೆ, ಕಾಂಗ್ರೆಸ್ಸಿಗೆ 63 ಸೀಟು ಕೊಡಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:45 IST
Last Updated 8 ಮಾರ್ಚ್ 2011, 18:45 IST

ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆ ಸೀಟು ಹಂಚಿಕೆಗಾಗಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಕಳೆದ ಮೂರು ದಿನಗಳಿಂದ ನಡೆದ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿದಿದೆ.

ಸೋನಿಯಾ ಪಟ್ಟಿಗೆ ಮಣಿದ ಕರುಣಾನಿಧಿ ಕೊನೆಗೂ 63 ಕ್ಷೇತ್ರಗಳನ್ನು ಮಿತ್ರ ಪಕ್ಷಕ್ಕೆ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ಗೆ 63 ಸ್ಥಾನಗಳನ್ನು ಬಿಟ್ಟುಕೊಡಲು ಡಿಎಂಕೆ ಸಮ್ಮತಿಸಿದೆ ಎಂದು ತಮಿಳುನಾಡು ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರೋಗ್ಯ ಸಚಿವ ಗುಲಾಂನಬಿ ಆಜಾದ್ ಮಂಗಳವಾರ ಸಂಜೆ ಸೋನಿಯಾ ನಿವಾಸದ ಮುಂದೆ ಪತ್ರಕರ್ತರಿಗೆ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 48 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತ್ತು. ಈ ಸಲ 15 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ನೀಡುತ್ತಿದೆ. ಹಳೇ ಕ್ಷೇತ್ರಗಳ ಜತೆ ಹೊಸ ಕ್ಷೇತ್ರಗಳನ್ನು ನಿಗದಿಪಡಿಸಲು ಉಭಯ ಪಕ್ಷಗಳ ನಡುವೆ ಮಾತುಕತೆ ಮುಂದುವರಿದಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಡಿಎಂಕೆ ಸಚಿವ ದಯಾನಿಧಿ ಮಾರನ್ ಸಂಸತ್ತಿನಲ್ಲಿ ಎರಡು ಸುತ್ತು ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಗುಲಾಂನಬಿ ಅವರೂ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ಎರಡು ಪಕ್ಷಗಳ ನಡುವೆ ನಡೆದ ಸೀಟು ಹಂಚಿಕೆ ಹಗ್ಗಜಗ್ಗಾಟ 50 ಸೀಟುಗಳಿಂದ ಆರಂಭವಾಗಿ ಕೊನೆಗೆ 63 ಸೀಟುಗಳಿಗೆ ಬಂದು ನಿಂತಿತು.  63 ಕ್ಷೇತ್ರಗಳನ್ನು ತಾನೇ ನಿರ್ಧರಿಸುವ ಬೇಡಿಕೆಯನ್ನು ಕಾಂಗ್ರೆಸ್ ಮುಂದಿಟ್ಟಿತು. ಡಿಎಂಕೆ 60 ಸ್ಥಾನಗಳನ್ನು ಮಾತ್ರ ಬಿಡುವುದಾಗಿ ಬಿಗಿ ನಿಲುವು ತಳೆಯಿತು.

ಕಾಂಗ್ರೆಸ್ ಬೇಡಿಕೆ ಒಪ್ಪದ ಡಿಎಂಕೆ ಮನಮೋಹನ್ ಸಂಪುಟದಲ್ಲಿರುವ ತನ್ನ ಆರು ಸಚಿವರನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಬೆದರಿಕೆ ಹಾಕಿತ್ತು. ಯುಪಿಎಗೆ ‘ವಿಷಯಾಧಾರಿತ ಬೆಂಬಲ‘ ನೀಡುವುದಾಗಿ ಹೇಳಿತು. ಆದರೆ, ಮೈತ್ರಿ ಕಡಿದುಕೊಳ್ಳಲು ಇಚ್ಚಿಸದ ಉಭಯ ಪಕ್ಷಗಳು ತೆರೆಮರೆಯಲ್ಲಿ ನಡೆಸಿದ ಸತತ ಸಂಧಾನದ ಫಲವಾಗಿ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯಿತು.

ಪ್ರಣವ್ ಜತೆ ಮಾತುಕತೆ ಮುಗಿಸಿ ಮತ್ತೊಬ್ಬ ಡಿಎಂಕೆ ಸಚಿವ ಎಂ.ಕೆ. ಅಳಗಿರಿ ಅವರ ಜತೆ ಸೋನಿಯಾ ಮನೆಗೆ ತೆರಳಿದ ಮಾರನ್ ಸಮಸ್ಯೆ ಬಗೆಹರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಕರುಣಾನಿಧಿ ಅವರು ಕಳೆದ ಶುಕ್ರವಾರ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ‘ದುಬಾರಿ ಬೇಡಿಕೆ’ ಮುಂದಿಟ್ಟಿದ್ದ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು.

ಚುನಾವಣೆ ಬಳಿಕ ಅಧಿಕಾರ ಹಂಚಿಕೆ ಕುರಿತಂತೆ ಏನಾದರೂ ಒಪ್ಪಂದ ಆಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಭಯ ಪಕ್ಷಗಳ ನಡುವಿನ ಮಾತುಕತೆಯಲ್ಲಿ ಪ್ರಣವ್ ಮುಖರ್ಜಿ ಹಾಗೂ ದಯಾನಿಧಿ ಮಾರನ್ ಮಹತ್ವದ ಪಾತ್ರ ವಹಿಸಿದರು. ಪ್ರಣವ್ ಮುಖರ್ಜಿ ಅವರು ಡಿಎಂಕೆ ವರಿಷ್ಠ ಕರುಣಾನಿಧಿ ಜತೆಗೆ ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿ,     ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿ ಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.