ರಾಳೇಗಣಸಿದ್ಧಿ, ಮಹಾರಾಷ್ಟ್ರ (ಪಿಟಿಐ): ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳ ಪೈಕಿ ಯಾರೂ ಯೋಗ್ಯರಲ್ಲ ಎನಿಸಿದರೆ ಮತಚೀಟಿಯ ಕೊನೆಯಲ್ಲಿ ಇರುವ ‘ಮೇಲಿನವರು ಯಾರೂ ಅಲ್ಲ’ (ನೋಟಾ) ಎಂಬುದರ ಮುಂದೆ ಮತ ಮುದ್ರೆ ಒತ್ತುವಂತೆ ಭ್ರಷ್ಟಾಚಾರ ಆಂದೋಲನದ ಮುಖ್ಯಸ್ಥ ಅಣ್ಣಾ ಹಜಾರೆ ಅವರು ಮತದಾರರಿಗೆ ಕರೆ ನೀಡಿದ್ದಾರೆ.
ಆಡಳಿತದಲ್ಲಿ ಇರುವ ಪಕ್ಷವನ್ನು ಬದಲಾಯಿಸಿದ ತಕ್ಷಣ ದೇಶದಲ್ಲಿ ಬದಲಾವಣೆ ಬರುವುದಿಲ್ಲ. ಭ್ರಷ್ಟಾಚಾರ ವಿಚಾರದಲ್ಲಿ ಒಂದು ಪಕ್ಷ ಸ್ನಾತಕ ಪದವಿ ಪಡೆದಿದ್ದರೆ ಇನ್ನೊಂದು ಪಕ್ಷ ಸ್ನಾತಕೋತ್ತರ ಪದವಿ ಪಡೆದಿರುತ್ತದೆ. ಆದ್ದರಿಂದ ತಲಸ್ಪರ್ಶಿ ಬದಲಾವಣೆಗೆ ವಿಧಾನಸಭೆ ಮತ್ತು ಲೋಕಸಭೆಗೆ ಪ್ರಾಮಾಣಿಕ ಮತ್ತು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಹಜಾರೆ ಸಲಹೆ ಮಾಡಿದ್ದಾರೆ.
ರಾಜಕೀಯ ಪಕ್ಷಗಳು ಗೂಂಡಾ, ಭ್ರಷ್ಟ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತದಾರರು ಅಂತಹವರನ್ನು ತಿರಸ್ಕರಿಸಬೇಕು ಮತ್ತು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಾಗೃತ ಮತದಾರರೇ ಪ್ರಜಾಪ್ರಭುತ್ವದ ಆಧಾರಸ್ತಂಭ, ಆದ್ದರಿಂದ ಈ ಬಾರಿ ಮತದಾರರು ಸೂಕ್ತ ಅಭ್ಯರ್ಥಿ ಇಲ್ಲದಿದ್ದಲ್ಲಿ ‘ಮೇಲಿನವರು ಯಾರೂ ಅಲ್ಲ’ ಎಂಬ ಆಯ್ಕೆಯನ್ನು ಅನುಸರಿಸಬೇಕು ಎಂದು ಹಜಾರೆ ಹೇಳಿದ್ದಾರೆ. ಅನ್ಯಾಯಕ್ಕೆ ಒಳಗಾದಾಗ ಮತದಾರರು ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಪಾಠ ಕಲಿಸುವ ಮಾತನಾಡುತ್ತಾರೆ. ಆದರೆ ಹಣ, ಹೆಂಡದ ಆಮಿಷ ಒಡ್ಡಿದಾಗ ಅದನ್ನು ಮರೆತುಬಿಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.