ADVERTISEMENT

ಮತ್ತೆ ಮಾತುಕತೆಗೆ ಪ್ರಧಾನಿ ನಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 17:05 IST
Last Updated 16 ಫೆಬ್ರುವರಿ 2011, 17:05 IST

ನವದೆಹಲಿ (ಪಿಟಿಐ): ಬಾಹ್ಯಾಕಾಶ ಆಯೋಗವು ರದ್ದುಪಡಿಸಲು ನಿರ್ಧರಿಸಿರುವ ಅಂತರಿಕ್ಷ್ ನೊಂದಿಗಿನ ತನ್ನ ವಿವಾದಿತ ಎಸ್-ಬ್ಯಾಂಡ್ ತರಂಗಾಂತರ ಪರವಾನಗಿ ಒಪ್ಪಂದವನ್ನು ಮುಂದುವರಿಸುವ ಬಗ್ಗೆ ದೇವಾಸ್ ಜೊತೆ ಮತ್ತೆ ಮಾತುಕತೆ ನಡೆಸುವ ಯಾವುದೇ ಸಲಹೆಗಳನ್ನು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಇಲ್ಲಿ ಬಲವಾಗಿ ತಳ್ಳಿಹಾಕಿದ್ದಾರೆ.

“ಸರ್ಕಾರ ಯಾವುದೇ ಹಿಂಬಾಗಿಲಿನ ಮಾತುಕತೆ ನಡೆಸುವುದಿಲ್ಲ. ಕಳೆದ ಜುಲೈನಲ್ಲಿ ಬಾಹ್ಯಾಕಾಶ ಆಯೋಗ ಕೈಗೊಂಡ ನಿರ್ಧಾರವನ್ನು ಬದಲಿಸುವ ಪ್ರಯತ್ನಕ್ಕೆ ತಮ್ಮ ಕಚೇರಿ ಕೈಹಾಕುವುದಿಲ್ಲ. ಈ ನಿಟ್ಟಿನಲ್ಲಿ ದೇಶ ಮತ್ತು ಜನತೆಗೆ ಸೂಕ್ತ ಕ್ರಮದ ಭರವಸೆ ನೀಡುತ್ತೇನೆ” ಎಂದು ಅವರು ಬುಧವಾರ ಇಲ್ಲಿ ವಿದ್ಯುನ್ಮಾನ ಮಾಧ್ಯಮ ಸಂಪಾದಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದರು.

‘ಒಂದು ವೇಳೆ ಒಪ್ಪಂದ ರದ್ದುಗೊಳ್ಳಲು ನಿಧಾನವಾಗಿದ್ದಲ್ಲಿ, ಅದಕ್ಕೆ ನಿಯಮಾವಳಿಯ ತೊಡಕು ಕಾರಣ. ಒಪ್ಪಂದ ರದ್ಧತಿ ಪ್ರಕ್ರಿಯೆಯಲ್ಲಿ ವಿಳಂಬವಾದರೂ, ಯಾವುದೇ ರೀತಿಯಲ್ಲೂ ಈ ಗುತ್ತಿಗೆ ಈಗ ಕಾರ್ಯ ನಿರ್ವಹಣೆಯಲ್ಲಿಲ್ಲ’ ಎಂದರು.

ಅಂತರಿಕ್ಷ್ ಕಾರ್ಪೊರೇಷನ್ ಮತ್ತು ಇಸ್ರೊ ವಾಣಿಜ್ಯ ಘಟಕವು 2005ರ ಜನವರಿಯಲ್ಲಿ ದೇವಾಸ್ ಮಲ್ಟಿ ಮೀಡಿಯಾ ಜೊತೆ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರನ್ವಯ ಇಸ್ರೋ ನಿರ್ಮಿಸುವ ಎರಡು ಉಪಗ್ರಹಗಳಲ್ಲಿ ಶೇ 90ರಷ್ಟು ಟ್ರಾನ್ಸ್‌ಪಾಂಡರ್‌ಗಳನ್ನು (ರೇಡಿಯೊ ಸಂಜ್ಞೆಗಳನ್ನು ಗ್ರಹಿಸಿ, ಸ್ವಯಂ ಚಾಲನೆಯಿಂದ ಬೇರೆ ಸಂಜ್ಞೆಗಳನ್ನು ಬಿತ್ತರಿಸುವ ಯಂತ್ರ) ಅಳವಡಿಸುವ ಗುತ್ತಿಗೆಯನ್ನು ದೇವಾಸ್‌ಗೆ ನೀಡಲಾಗಿತ್ತು. ಆದರೆ ಮಾಧ್ಯಮ ವರದಿಗಳ ಪ್ರಕಾರ, ಈ ಗುತ್ತಿಗೆ ಒಪ್ಪಂದದಿಂದ ಸರ್ಕಾರಿ ಖಜಾನೆಗೆ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸಲು ಸೂಚಿಸಿ ಕಳೆದ ಜುಲೈನಲ್ಲಿ ಬಾಹ್ಯಾಕಾಶ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.