ADVERTISEMENT

ಮತ್ತೊಂದು ಹಡಗು ದುರಂತ : ಕಮಾಂಡರ್‌ ಸಾವು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಮುಂಬೈ: ಹತ್ತೇ ದಿನಗಳ ಅವಧಿಯಲ್ಲಿ ಭಾರತೀಯ ನೌಕಾಪಡೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮುಂಬೈನ ಮಜಗಾಂವ್‌ ಹಡಗು­ಕಟ್ಟೆಯಲ್ಲಿ ಶುಕ್ರವಾರ ‘ಐಎನ್‌ಎಸ್‌ ಕೋಲ್ಕತ್ತ’ ಯುದ್ಧ ನೌಕೆಯೊಳಗೆ ಇಂಗಾಲದ ಡೈ ಆಕ್ಸೈಡ್‌ ಸೋರಿಕೆ­ಯಿಂದ ಒಬ್ಬ ಕಮಾಂಡರ್‌ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ಫೆ.26 ರಂದು ಮುಂಬೈ ಕಡಲ ತೀರದಲ್ಲಿ ‘ಐಎನ್‌ಎಸ್‌ ಸಿಂಧುರತ್ನ’ ಜಲಾಂತರ್ಗಾಮಿಯಲ್ಲಿ ಹೊಗೆ ಕಾಣಿಸಿಕೊಂಡು ಇಬ್ಬರು ಅಧಿಕಾರಿಗಳು ಮೃತಪಟ್ಟ ಘಟನೆ ಮರೆಯುವ ಮುನ್ನವೇ ಈ ದುರಂತ ನಡೆದಿದೆ.

‘ಮಧ್ಯಾಹ್ನ 1 ಗಂಟೆ ವೇಳೆ ನೌಕೆ­ಯಲ್ಲಿ ಅನಿಲ ಸೋರಿಕೆ ಕಂಡುಬಂತು. ಎಂಜಿನ್‌ ಕೋಣೆ ಒಳಗಡೆ ಸಿಕ್ಕಿಹಾಕಿಕೊಂಡಿದ್ದ ಕಮಾಂಡರ್‌ ಕುನಾಲ್‌ ವಾಧ್ವಾ (42) ಇಂಗಾಲದ ಡೈ ಆಕ್ಸೈಡ್‌ ಮಿತಿಮೀರಿ ಸೇವನೆಯಿಂದ ಆಸ್ಪತ್ರೆಗೆ ಸೇರಿಸುವ ಮೊದಲೇ ಮೃತಪಟ್ಟರು’ ಎಂದು ಹಡಗುಕಟ್ಟೆ ಮಾಧ್ಯಮ ಅಧಿಕಾರಿ ಪರ್ವೇಜ್‌ ಪಂಥ್ಯಾಕಿ ಸುದ್ದಿಗಾರರಿಗೆ ತಿಳಿಸಿದರು.

ಈ ದುರ್ಘಟನೆಯಲ್ಲಿ ಬೆಂಕಿ ಇಲ್ಲವೇ   ಸ್ಫೋಟ ಕಾಣಿಸಿಕೊಂಡಿಲ್ಲ. ಹಾಗಾಗಿ ನೌಕೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
ದುರಂತಕ್ಕೆ ಒಳಗಾದ ಈ ನೌಕೆ ದೇಶದ ಅತ್ಯುತ್ತಮ ಆಧುನಿಕ ಯುದ್ಧ ನೌಕೆ ಎನಿಸಿದ್ದು ಇನ್ನೂ ನಿರ್ಮಾಣ ಹಂತದಲ್ಲಿದೆ. ಕೆಲವೇ ವಾರಗಳಲ್ಲಿ ಕಾರ್ಯಾಚರಣೆಗೆ ಇಳಿಯಲಿತ್ತು.

ಸದ್ಯ ಈ ನೌಕೆಯನ್ನು ಮುಂಬೈ ಬಂದರಿನಲ್ಲಿ ಪರೀಕ್ಷಾರ್ಥ ಪ್ರಯೋಗಕ್ಕೆ ನಿಲ್ಲಿಸಲಾಗಿತ್ತು. ಐಎನ್‌ಎಸ್‌ ಕೊಚ್ಚಿ ಹಾಗೂ ಐಎನ್‌ಎಸ್‌ ಚೆನ್ನೈ ಇದೇ ಶ್ರೇಣಿಯ ಇನ್ನೆರಡು ಯುದ್ಧ ನೌಕೆಗಳಾಗಿವೆ.

ಫೆ.26ರ ಜಲಾಂತರ್ಗಾಮಿ ದುರಂತದ ತಕ್ಷಣ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಡಿ.ಕೆ. ಜೋಶಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಳೆದ ಏಳು ತಿಂಗಳ ಅವಧಿಯಲ್ಲಿ ನೌಕಾಪಡೆಯಲ್ಲಿ ಸಂಭವಿಸಿದ 12ನೇ ದುರಂತ ಇದು. ಆ. 14ರಂದು ‘ಐಎನ್‌ಎಸ್‌ ಸಿಂಧುರಕ್ಷಕ್‌’ ಮುಂಬೈ ಬಂದರಿನಲ್ಲಿ ಮುಳುಗಿ ಅದರಲ್ಲಿದ್ದ ಎಲ್ಲ 18 ಜನ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.