ADVERTISEMENT

ಮದ್ಯ ವಿರೋಧಿ ಆಂದೋಲನಕ್ಕೆ ಒತ್ತು, ಮಾರಾಟಕ್ಕೆ ಕುತ್ತು

ರಾಜ್ಯ ವಾರ್ತಾ ಪತ್ರ -ಕೇರಳ

ಸಾನು ಜಾರ್ಜ್
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ತಿರುವನಂತಪುರ (ಐಎಎನ್‌ಎಸ್‌): ಕೇರಳದಲ್ಲಿ ಇದೇ ಮೊತ್ತಮೊದಲ ಬಾರಿಗೆ ಮದ್ಯ ಮಾರಾಟ ಪ್ರಮಾಣ ತಗ್ಗಿದೆ. ರಾಜ್ಯದ ಅಬಕಾರಿ ಸಚಿವ ಕೆ.ಬಾಬು ಈ ಯಶಸ್ಸಿಗಾಗಿ ಬೀಗುತ್ತಿದ್ದಾರೆ.

ಬಾಬು ಅವರು ನೀಡಿರುವ ಅಂಕಿಅಂಶಗಳ ಪ್ರಕಾರ (ಪ್ರಸಕ್ತ ಸಾಲಿನ ಜುಲೈ ಅವಧಿಯವರೆಗೆ), ಮದ್ಯ ಮತ್ತು ಬಿಯರ್‌ ಮಾರಾಟದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ. ಹಣದ ಲೆಕ್ಕದಲ್ಲಿ ಹೇಳುವುದಾದರೆ, ಮಾರಾಟ ತೆರಿಗೆಯಲ್ಲಿ ಶೇ 5ರಷ್ಟು ಏರಿಕೆ ನಂತರವೂ ವಹಿವಾಟು ಮೌಲ್ಯ ಶೇ 1ರಷ್ಟು ಮಾತ್ರ ಹೆಚ್ಚಾಗಿದೆ.

‘ರಾಜ್ಯ ಸರ್ಕಾರವು ನಿರಂತರವಾಗಿ ಮದ್ಯ ವಿರೋಧಿ ಆಂದೋನಲ ನಡೆಸುತ್ತಿರುವುದು ಈ ಇಳಿಕೆಗೆ ಮುಖ್ಯ ಕಾರಣ. ರಾಜ್ಯದಲ್ಲಿ ಹೊಸದಾಗಿ ಒಂದೂ ಚಿಲ್ಲರೆ ಮಾರಾಟ ಮಳಿಗೆಯನ್ನು ಶುರು ಮಾಡುವುದಿಲ್ಲವೆಂದುಮುಖ್ಯಮಂತ್ರಿ ಊಮ್ಮನ್‌ ಚಾಂಡಿ ಮತ್ತು ನಾನು ಈಗಾಗಲೇ ಪ್ರಕಟಿಸಿದ್ದೇವೆ’ ಎನ್ನುತ್ತಾರೆ ಬಾಬು.

ರಾಜ್ಯದಲ್ಲಿ ಮದ್ಯ ಮತ್ತು ಬಿಯರ್‌ ಮಾರಾಟಕ್ಕೆ ಕೇರಳ ರಾಜ್ಯ ಪಾನೀಯ ನಿಗಮವೇ (ಕೆಎಸ್‌ಬಿಸಿ) ಏಕೈಕ ಸಗಟು ಪೂರೈಕೆದಾರ ಸಂಸ್ಥೆಯಾಗಿದೆ. 708 ಹೋಟೆಲ್‌ ಬಾರುಗಳು ಮತ್ತು ಸರ್ಕಾರಿ ಸ್ವಾಮ್ಯದ 383 ಚಿಲ್ಲರೆ ಮಳಿಗೆಗಳ ಮೂಲಕ ಇದು ಮಾರಾಟವಾಗುತ್ತದೆ.

‘ಈ ಸರ್ಕಾರ 2011ರ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಮದ್ಯ ಮತ್ತು ಬಿಯರ್‌ ಮಾರಾಟ ಹಂತಹಂತವಾಗಿ ಇಳಿಮುಖವಾಗುತ್ತಿದೆ.ವಹಿವಾಟು ಮೌಲ್ಯದಲ್ಲಿಯೂ ಇದು ಕಂಡುಬಂದಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕೆಎಸ್‌ಬಿಸಿಯ ಒಬ್ಬ ಅಧಿಕಾರಿ.

ಕೆಎಸ್‌ಬಿಸಿ ಅಂಕಿಅಂಶಗಳ ಪ್ರಕಾರ, ಮಾರ್ಚ್‌ 31ಕ್ಕೆ ಕೊನೆಗೊಂಡ ಕಳೆದ ಆರ್ಥಿಕ ವರ್ಷದಲ್ಲಿ 3.45 ಕೋಟಿ ಮದ್ಯ ಮತ್ತು ಬಿಯರ್‌ ಕೇಸ್‌ಗಳು ಮಾರಾಟವಾಗಿವೆ (ಒಂದು ಕೇಸ್‌ನಲ್ಲಿ 12 ಬಾಟಲಿಗಳು ಇರುತ್ತವೆ). ಇದರ ವಹಿವಾಟು ಮೊತ್ತ 8,818 ಕೋಟಿ ರೂಪಾಯಿ. ಆ ಹಿಂದಿನ ವರ್ಷ, ಅಂದರೆ 2011–12ರಲ್ಲಿ 3.38 ಕೋಟಿ ಕೇಸ್‌ಗಳು ಮಾರಾಟವಾಗಿ 7,681 ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಇನ್ನು ಈ ವರ್ಷ ಜುಲೈವರೆಗೆ 1.15 ಕೋಟಿ ಕೇಸ್‌ಗಳ ಮಾರಾಟವಾಗಿ 3,005 ಕೋಟಿ ರೂಪಾಯಿ ವಹಿವಾಟು ಆಗಿದೆ.
‘ಮದ್ಯ ವಿರೋಧಿ ಆಂದೋಲನದ ಮೇಲಿನ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದೇವೆ. ಆರಂಭದಲ್ಲಿ ಇದಕ್ಕಾಗಿ 25 ಲಕ್ಷ ರೂಪಾಯಿಯನ್ನು ಮಾತ್ರ ಮೀಸಲಿಡಲಾಗಿತ್ತು. ಆದರೆ ಈ ಸಾಲಿನಲ್ಲಿ 2 ಕೋಟಿ ರೂಪಾಯಿಯನ್ನು ತೆಗೆದಿರಿಸಿದ್ದೇವೆ’ ಎಂದೂ ಬಾಬು ಹೇಳುತ್ತಾರೆ.

ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಮೂಲಕ ಮತ್ತು ರಾಜ್ಯದ ಮಹಿಳಾ ಆಂದೋಲನವಾದ ‘ಕುಟುಂಬಶ್ರೀ’ ಮೂಲಕ ಮದ್ಯ ವಿರೋಧಿ ಪ್ರಚಾರ ನಡೆಸಲಾಗುತ್ತಿದೆ.

ಇನ್ನು ‘ರಮ್‌’, ಮದ್ಯಪ್ರಿಯರ ಮೊದಲ ಆಯ್ಕೆಯಾಗಿದ್ದು, ಒಟ್ಟು ಮದ್ಯ ಮಾರಾಟದಲ್ಲಿ ಶೇ 55ರಷ್ಟನ್ನು ಇದೇ ಆಕ್ರಮಿಸಿದೆ. ನಂತರದ ಸ್ಥಾನದಲ್ಲಿ ಬ್ರ್ಯಾಂಡಿ ಇದ್ದು, ಶೇ 40ರ ಪಾಲನ್ನು ಹೊಂದಿದೆ. ವೋಡ್ಕಾ ಪಾಲು ಶೇ 4ರಷ್ಟು ಇದೆ. ಜಿನ್‌, ವಿಸ್ಕಿ ಮತ್ತು ವೈನ್‌ಗಳು ಸೇರಿ ಶೇ 1ರಷ್ಟು ಮಾತ್ರ ಪಾಲು ಹೊಂದಿವೆ.

ಒಂದೆಡೆ ರಾಜ್ಯದಲ್ಲಿ ಮದ್ಯ ವಿರೋಧಿ ಆಂದೋಲನದ ನಡೆಯುತ್ತಿದ್ದರೆ, ಮತ್ತೊಂದೆಡೆ ಜನರಲ್ಲಿ ಮದ್ಯ ಸಂಬಂಧಿ ಯಕೃತ್ತಿನ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದ ಪ್ರಮುಖ ಆಸ್ಪತ್ರೆಯೊಂದರ ವೈದ್ಯರೊಬ್ಬರು ನಡೆಸಿದ ಅಧ್ಯಯನದ ಪ್ರಕಾರ, ಅವರ ಬಳಿಗೆ ತಿಂಗಳೊಂದಕ್ಕೆ ಸರಾಸರಿ ಮೂವರು ಮದ್ಯ ಸಂಬಂಧಿ ಯಕೃತ್ತಿನ ರೋಗಿಗಳು ಬರುತ್ತಿದ್ದಾರೆ. ‘37ರಿಂದ 45 ವರ್ಷದೊಳಗಿನವರಲ್ಲಿ ಮದ್ಯ ಸಂಬಂಧಿ ರೋಗಿಗಳ ಸಂಖ್ಯೆ ಇನ್ನು ಕೆಲವೇ ವರ್ಷಗಳಲ್ಲಿ ತೀವ್ರವಾಗಿ ಏರಲಿದೆ’ ಎಂದು ಎಚ್ಚರಿಸುತ್ತಾರೆ ಅವರು.

ಯುವ ಜನತೆ ಪೋಷಕರ ನಿಯಂತ್ರಣದಲ್ಲಿದ್ದ ಕಾಲ ಎಂದೋ ಆಗಿ ಹೋಗಿದೆ. ಇಂದಿನ ‘ಜಮಾನಾ’ದಲ್ಲಿ ಯುವ ಜನಾಂಗಕ್ಕೆ ಯಾವ ನಿರ್ಬಂಧವೂ ಇಲ್ಲ; ಹೀಗಾಗಿ, ಈ ವಯಸ್ಸಿನಲ್ಲೇ ಅವರಲ್ಲಿ ಅರಿವು ಮೂಡಿಸಿ ರಾಜ್ಯವನ್ನು ಸಂಭಾವ್ಯ ಅಪಾಯದಿಂದ ಪಾರು ಮಾಡಬೇಕು ಎಂಬುದು ಆ ವೈದ್ಯರು ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.