ADVERTISEMENT

ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ರೈತರ ಸಾಲ ಮನ್ನಾ ಆದೇಶಕ್ಕೆ ಸುಪ್ರೀಂ ತಡೆ

ಏಜೆನ್ಸೀಸ್
Published 3 ಜುಲೈ 2017, 7:58 IST
Last Updated 3 ಜುಲೈ 2017, 7:58 IST
ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ತಮಿಳುನಾಡು ರೈತರು
ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ತಮಿಳುನಾಡು ರೈತರು   

ನವದೆಹಲಿ: ಬೆಳೆ ಸಾಲ ಮನ್ನಾ ಮಾಡುವ ತಮಿಳುನಾಡು ಸರ್ಕಾರದ ಯೋಜನೆ ವಿಸ್ತರಿಸುವಂತೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಐದು ಎಕರೆಗಿಂತಲೂ ಹೆಚ್ಚು ಭೂಮಿ ಹೊಂದಿರುವ ರೈತರು ಪಡೆದಿರುವ ಬೆಳೆ ಸಾಲವೂ ಮದ್ರಾಸ್‌ ಹೈಕೋರ್ಟ್‌ ಆದೇಶದಂತೆ ಮನ್ನಾ ಮಾಡಬೇಕಿತ್ತು. ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್ ನೇತೃತ್ವದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ನೊಟೀಸ್‌ ಜಾರಿ ಮಾಡಿದೆ.

ಎಲ್ಲ ರೈತರ ಬೆಳೆ ಸಾಲವನ್ನು ಮನ್ನಾ ಮಾಡುವಂತೆ ಹೈಕೋರ್ಟ್‌ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು.

ADVERTISEMENT

ಸಹಕಾರಿ ಬ್ಯಾಂಕ್‌ ಹಾಗೂ ಸಂಘಗಳಿಂದ ಸಾಲ ಪಡೆದಿರುವ, ಐದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವ ಸಣ್ಣ ಹಾಗೂ ಮಧ್ಯಮ  ರೈತರಿಗೆ ಮಾತ್ರ ಸಾಲ ಮನ್ನಾ ಅನ್ವಯ ವಾಗುವಂತೆ ಯೋಜನೆ ರೂಪಿಸಲಾಗಿತ್ತು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.

2017ರ ಏಪ್ರಿಲ್‌ 4ರಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ನ್ಯಾಯಪೀಠವು ನೀಡಿರುವ ಆದೇಶವು ಸರ್ಕಾರದ ಆರ್ಥಿಕ ನೀತಿ ನಿರ್ಣಯದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಿವರಿಸಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ.

ಮದ್ರಾಸ್‌ ಹೈಕೋರ್ಟ್‌ ಆದೇಶದಿಂದ ಹೆಚ್ಚುವರಿಯಾಗಿ 3 ಲಕ್ಷ ರೈತರು ಸಾಲ ಮನ್ನಾ ಮಾಡಬೇಕಾದ ಇಕ್ಕಟ್ಟಿಗೆ ತಮಿಳುನಾಡು ಸರ್ಕಾರ ಸಿಲುಕಿತು. ಇದರಿಂದಾಗಿ ಸರ್ಕಾರದ ಬೊಕ್ಕಸದ ಹೊರೆ ₹5,780 ಕೋಟಿಯಿಂದ ₹7,769 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.