ADVERTISEMENT

ಮಧ್ಯಪ್ರದೇಶ ಪತ್ರಕರ್ತನ ಕುಟುಂಬ ಹತ್ಯೆ ಪ್ರಕರಣ: ಸತ್ಯಶೋಧನಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ನಡೆದ ಪತ್ರಕರ್ತ ಚಂದ್ರಿಕಾ ರಾಯ್ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆ ಪ್ರಕರಣದ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿ ಮುಖ್ಯಸ್ಥ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರು ಗುರುವಾರ ಮೂರು ಸದಸ್ಯರನ್ನೊಳಗೊಂಡ ಸತ್ಯಶೋಧನಾ ತಂಡವನ್ನು ರಚಿಸಿದ್ದಾರೆ.

ಸತ್ಯಶೋಧನಾ ತಂಡದ ನೇತೃತ್ವವನ್ನು  ಕೊಸುರಿ ಅಮರನಾಥ್ ಅವರು ವಹಿಸಲಿದ್ದಾರೆ. ರಾಜೀವ್ ರಂಜನ್ ಮತ್ತು ಕಲ್ಯಾಣ್ ಬರೂಹ ಅವರು ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ. ಈ ಮೂವರೂ ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರಾಗಿದ್ದಾರೆ.

`ಸತ್ಯ ಶೋಧನಾ ತಂಡವು ಚಂದ್ರಿಕಾ ರಾಯ್ ಮತ್ತು ಅವರ ಕುಟುಂಬ ಮೂವರು ಸದಸ್ಯರ ಕೊಲೆ ಪ್ರಕರಣದ ತನಿಖೆ ನಡೆಸಿ ಶೀಘ್ರದಲ್ಲಿ ಮಂಡಳಿಗೆ ವರದಿ ಸಲ್ಲಿಸಲಿದೆ~ ಎಂದು ಮಂಡಳಿ ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ. 42 ವರ್ಷ ವಯಸ್ಸಿನ ಚಂದ್ರಿಕಾ ರಾಯ್ ಮತ್ತು ಅವರ ಪತ್ನಿ ದುರ್ಗಾ ರಾಯ್ (40), ಪುತ್ರ ಜಲಜ್ (19) ಮತ್ತು ಪುತ್ರಿ ನಿಶಾ (14) ಅವರನ್ನು ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿರುವ ರಾಯ್ ನಿವಾಸಲ್ಲಿ ಕಳೆದ ಶನಿವಾರ ಹತ್ಯೆಮಾಡಲಾಗಿತ್ತು.

ADVERTISEMENT

ರಾಯ್ ಅವರು `ನವಭಾರತ~ ಮತ್ತು `ಹಿತವಾದ~ ದಿನಪತ್ರಿಕೆಗಳಿಗಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸ್ಥಳೀಯ ಜಿಲ್ಲಾ ಮಂಡಳಿಯ ಸದಸ್ಯೆಯಾಗಿದ್ದರು. ಸತ್ಯಶೋಧನಾ ತಂಡವು ನಡೆಸಲಿ ರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಮಧ್ಯಪ್ರದೇಶ ರಾಜ್ಯಸರ್ಕಾರವನ್ನು ಪತ್ರಿಕಾ ಮಂಡಳಿ ಕೋರಿದೆ.

ಪತ್ರಿಕಾ ಮಂಡಳಿಯು ಈಗಾಗಲೇ ಪತ್ರಕರ್ತರ ಸುರಕ್ಷತೆಯ ವಿಚಾರವಾಗಿ ಹಲವು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಉಮರಿಯಾ ವರದಿ:  ಪ್ರಕರಣವನ್ನು ಶೀಘ್ರದಲ್ಲಿ ಭೇದಿಸುವ ವಿಶ್ವಾಸವನ್ನು ಮಧ್ಯಪ್ರದೇಶದ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಗುರುವಾರ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.