ADVERTISEMENT

ಮಮತಾ ಅಸ್ವಸ್ಥ, ಮಿತ್ರಾ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 20:00 IST
Last Updated 9 ಏಪ್ರಿಲ್ 2013, 20:00 IST

ನವದೆಹಲಿ (ಪಿಟಿಐ):  ಪಶ್ಚಿಮ ಬಂಗಾಳ ಪೊಲೀಸರ ದೌರ್ಜನ್ಯದಿಂದಾಗಿಯೇ ವಿದ್ಯಾರ್ಥಿ ಮುಖಂಡ ಸುದೀಪ್ತೊ ಗುಪ್ತಾ ಮೃತಪಟ್ಟಿದ್ದಾನೆ ಎಂದು ದೂರಿ ಈ ಸಂಬಂಧ ಎಸ್‌ಎಫ್‌ಐ ಹಾಗೂ ಸಿಪಿಎಂ ಕಾರ್ಯಕರ್ತರು  ಮಂಗಳವಾರ ಇಲ್ಲಿ ನಡೆಸಿದ ಪ್ರತಿಭಟನೆ ತೀವ್ರಸ್ವರೂಪ ಪಡೆದ ಪರಿಣಾಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸ್ವಸ್ಥರಾಗಿದ್ದರೆ, ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಲು ಮಮತಾ ಅವರು ಅಮಿತ್ ಮಿತ್ರಾ ಅವರೊಂದಿಗೆ ಮಧ್ಯಾಹ್ನ ಇಲ್ಲಿಯ ಕೇಂದ್ರ ಯೋಜನಾ ಆಯೋಗದ ಕಚೇರಿಗೆ ಆಗಮಿಸಿದ ಸಂದರ್ಭ ಪ್ರತಿಭಟನೆಯ ಬಿಸಿ ಅನುಭವಿಸಬೇಕಾಯಿತು.

ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಉದ್ರಿಕ್ತ ಗುಂಪು ಮಿತ್ರಾ ಅವರನ್ನು ಎಳೆದಾಡಿ ಅವರ ಅಂಗಿಯನ್ನು ಹರಿದು ಹಾಕಿತು.

ಘಟನೆಯಿಂದ ಆಘಾತಕ್ಕೆ ಒಳಗಾದಂತೆ ಕಂಡುಬಂದ ಮಮತಾ ಅಸ್ವಸ್ಥರಾಗಿದ್ದು,  ಸಂಜೆ ಪ್ರಧಾನಿ ಜತೆಗಿನ ಭೇಟಿಯನ್ನು ರದ್ದುಮಾಡಿದರು. ಮಮತಾ ಅವರಿಗೆ ಕೆಲಹೊತ್ತು ಆಕ್ಸಿಜನ್ ನೀಡಲಾಯಿತು. ಸಚಿವ ಮಿತ್ರಾ ಅವರಿಗೆ ಸಂಜೆ ಎದೆನೋವು ಕಾಣಿಸಿಕೊಂಡಿದ್ದು ಸ್ಥಳೀಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲು ಮಾಡಲಾಗಿದೆ.

ಮಮತಾ ಮಾಡಿರುವ ಆರೋಪವನ್ನು ಎಸ್‌ಎಫ್‌ಐ ಅಲ್ಲಗಳೆದಿದೆ.

ಈ ನಡುವೆ ಪ್ರತೀಕಾರವಾಗಿ ತೃಣಮೂಲ ಕಾಂಗ್ರೆಸ್‌ನವರು ಪಶ್ಚಿಮ ಬಂಗಾಳದ ವಿವಿಧೆಡೆ ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.