ADVERTISEMENT

ಮರಣದಂಡನೆಗೆ ನಕಾರ; ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ನವದೆಹಲಿ (ಪಿಟಿಐ): ಕ್ರೈಸ್ತ ಧರ್ಮ ಪ್ರಚಾರಕ ಗ್ರಹಾಂ ಸ್ಟೇನ್ಸ್ ಹಾಗೂ ಅವರ ಮಕ್ಕಳಿಬ್ಬರನ್ನು ಸಜೀವ ದಹಿಸಿದ ಅಪರಾಧಿ ದಾರಾಸಿಂಗ್‌ಗೆ ಮರಣದಂಡನೆ ವಿಧಿಸಬೇಕೆಂಬ ಸಿಬಿಐ ಕೋರಿಕೆಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಆತನಿಗೆ ಒರಿಸ್ಸಾ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಶುಕ್ರವಾರ ಎತ್ತಿಹಿಡಿದಿದೆ.

ಈ ಸಂಬಂಧ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪಿ.ಸದಾಶಿವಂ ಮತ್ತು ಬಿ.ಎಸ್.ಚೌಹಾಣ್ ಅವರನ್ನೊಳಗೊಂಡ ನ್ಯಾಯಪೀಠ ವಜಾ ಮಾಡಿತು. ಆಯಾ ಪ್ರಕರಣದ ವಸ್ತುಸ್ಥಿತಿ ಹಾಗೂ ಸನ್ನಿವೇಶ ಇತ್ಯಾದಿಗಳನ್ನು ಪರಿಗಣಿಸಿದ ನಂತರ ವಿರಳಾತಿ ವಿರಳ ಪ್ರಕರಣದಲ್ಲಿ ಮಾತ್ರ ಮರಣದಂಡನೆ ವಿಧಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.

‘ಈ ಪ್ರಕರಣದಲ್ಲಿ ಅಪರಾಧಿಗಳು ಎಸಗಿರುವ ದುಷ್ಕೃತ್ಯ ತೀವ್ರ ಖಂಡನೀಯವಾದರೂ ಇದು ವಿರಳಾತಿ ವಿರಳ ಪ್ರಕರಣವಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರು.ದಾರಾಸಿಂಗ್‌ಗೆ ಮರಣದಂಡನೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಒರಿಸ್ಸಾ ಹೈಕೋರ್ಟ್ 2005ರ ಮೇ 19ರಂದು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ನಂತರ ಈ ಶಿಕ್ಷೆ ಪ್ರಶ್ನಿಸಿ ಸಿಂಗ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೆ ಸಿಬಿಐ ಮರಣದಂಡನೆ ವಿಧಿಸಲು ಕೋರಿತ್ತು.

ವಕೀಲರಾದ ಕೆ.ಟಿ.ಎಸ್.ತುಳಸಿ, ರತ್ನಾಕರ ದಾಸ್ ಮತ್ತು ಶಿಬೊ ಶಂಕರ ಮಿಶ್ರ ದಾರಾಸಿಂಗ್ ಪರ ವಾದಿಸಿದ್ದರು. ಸಿಬಿಐ ಪರವಾಗಿ ವಾದ ಮಂಡಿಸಿದ್ದ ವಕೀಲ ಟಂಖಾ ಅವರು ಬರ್ಬರ ಹತ್ಯೆ ಎಸಗಿದ ದಾರಾಸಿಂಗ್‌ಗೆ ಮರಣದಂಡನೆಯೇ ಸೂಕ್ತ ಎಂದು ವಾದಿಸಿದ್ದರು. ವ್ಯಾನ್‌ನಲ್ಲಿ ಮಲಗಿದ್ದ ಸ್ಟೇನ್ಸ್ ಹಾಗೂ ಅವರಿಬ್ಬರು ಮಕ್ಕಳನ್ನು ಒರಿಸ್ಸಾದ ಮನೋಹರ್‌ಪುರ ಎಂಬ ಗ್ರಾಮದ ಚರ್ಚ್ ಮುಂದೆ 1999ರ ಜ.22ರಂದು ಜೀವಂತವಾಗಿ ದಹಿಸಲಾಗಿತ್ತು. ಇದರಲ್ಲಿ ಮಹೇಂದ್ರ ಎಂಬಾತನೂ ತಪ್ಪಿತಸ್ಥನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.