ತಿರುನಲ್ವೇಲಿ (ಪಿಟಿಐ): ನದಿಯಿಂದ ಅಕ್ರಮವಾಗಿ ತೆಗೆದಿದ್ದ ಮರಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಯತ್ನಿಸಿದ ಯುವಕನ ಮೇಲೆ ಲಾರಿಯನ್ನು ಚಲಾಯಿಸಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ನಡೆದಿದೆ.
ಮಧ್ಯಪ್ರದೇಶದಲ್ಲಿ ಗಣಿ ಮಾಫಿಯಾಕ್ಕೆ ತಡೆಯೊಡ್ಡಲು ಯತ್ನಿಸಿ ಯುವ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ನಾಲ್ಕು ದಿನಗಳ ಹಿಂದೆ ಇದೇ ರೀತಿ ದುರ್ಮರಣಕ್ಕೀಡಾಗಿದ್ದರು.
21 ವರ್ಷದ ಸತೀಶ್ ಕುಮಾರ್ ತಿರುನಲ್ವೇಲಿಯಲ್ಲಿ ಅಕ್ರಮ ಗಣಿ ಕ್ರೌರ್ಯಕ್ಕೆ ಬಲಿಯಾದ ಯುವಕ. 20 ಜನ ಗ್ರಾಮಸ್ಥರೊಂದಿಗೆ ಸೇರಿಕೊಂಡು ನಿಯಮಬಾಹಿರ ಮರಳು ಸಾಗಣೆ ವಿರುದ್ಧ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಸತೀಶ್ ಮೇಲೆ ಲಾರಿಯನ್ನು ಚಲಾಯಿಸಲಾಯಿತು.
ಘಟನೆಯ ನಂತರ ಭಯಗೊಂಡ ಗ್ರಾಮಸ್ಥರು ಸ್ಥಳದಿಂದ ಪಲಾಯನ ಮಾಡಿದರು ಎನ್ನಲಾಗಿದೆ.
ಲಾರಿ ಚಾಲಕನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.