ಮುಂಬೈ/ ಚಂಡೀಗಡ/ ಅಗರ್ತಲ (ಪಿಟಿಐ, ಐಎಎನ್‌ಎಸ್): ಪಾನ್ ಮಸಾಲ, ಗುಟ್ಕಾ ಮೊದಲಾದ ನಿಕೋಟಿನ್ ಉತ್ಪನ್ನಗಳ ಮೇಲೆ ಮಹಾರಾಷ್ಟ್ರ ಸರ್ಕಾರ ವಿಧಿಸಿರುವ ನಿಷೇಧ ಶುಕ್ರವಾರದಿಂದ ಜಾರಿಗೆ ಬಂದಿದೆ.
ಈ ನಿಷೇಧ ಮುಂದಿನ ಒಂದು ವರ್ಷದವರೆಗೂ ಜಾರಿಯಲ್ಲಿರುತ್ತದೆ. ಆನಂತರ, ಮತ್ತೊಮ್ಮೆ 12 ತಿಂಗಳ ಕಾಲ ವಿಸ್ತರಿಸಲು ಅವಕಾಶವಿದೆ. ರಾಜ್ಯ ಸಚಿವ ಸಂಪುಟದಲ್ಲಿ ಕಳೆದ ವಾರ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಹರಿಯಾಣ ಸಂಪುಟ ನಿರ್ಧಾರ: ಗುಟ್ಕಾ, ಪಾನ್ ಮಸಾಲಾ, ಜರ್ದಾ ಇನ್ನಿತರ ನಿಕೋಟಿನ್ ಪೂರಿತ ಉತ್ಪನ್ನಗಳ ಸಂಗ್ರಹಣೆ, ವಿತರಣೆ ಮತ್ತು ಮಾರಾಟ ನಿಷೇಧಿಸುವ ನಿರ್ಧಾರವನ್ನು ಹರಿಯಾಣ ಸರ್ಕಾರ ಕೈಗೊಂಡಿದೆ.
ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಗಸ್ಟ್ 15ರಿಂದ ಜಾರಿಗೆ ಬರಲಿದೆ.
ತಂಬಾಕು ಸೇವನೆಯಿಂದ ಅನೇಕರು ಕ್ಯಾನ್ಸರ್, ಜಠರ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಒತ್ತಡದಿಂದ ಬಳಲುತ್ತಿದ್ದಾರೆ. ಇದರಿಂದ ಮುಕ್ತರನ್ನಾಗಿ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೂಡಾ ತಿಳಿಸಿದ್ದಾರೆ.
ತ್ರಿಪುರಾದಲ್ಲಿ ದಂಡ: ರಾಜ್ಯದಲ್ಲಿ ಕ್ಯಾನ್ಸರ್ ಹಾಗೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ರೋಗಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪಾದಿತ ವಸ್ತುಗಳನ್ನು ಬಳಸುವುದಕ್ಕೆ ತ್ರಿಪುರ ಸರ್ಕಾರ ನಿರ್ಬಂಧ ಹೇರಿದೆ.
ಇದಕ್ಕಾಗಿ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನಾಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳನ್ನು ನೇಮಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ವಸ್ತುಗಳನ್ನು ಬಳಸುವವರಿಗೆ ಸ್ಥಳದಲ್ಲೇ ರೂ 200 ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
`ಶುಕ್ರವಾರ ಈ ಕುರಿತಂತೆ ಸರ್ಕಾರದ ಉನ್ನತ ಮಟ್ಟದ ಸಭೆ ನಡೆದಿದ್ದು ಸಾರ್ವಜನಿಕರನ್ನು ಮಾರಕವಾದ ತಂಬಾಕು ಉತ್ಪನ್ನಗಳಿಂದ ಮುಕ್ತಗೊಳಿಸಲು ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು~ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.